ಜಾರ್ಖಂಡ್: ಪ್ರಧಾನಿ ಬೆಂಗಾವಲು ವಾಹನಗಳ ಮುಂದೆ ಜಿಗಿದ ಮಹಿಳೆಯ ಬಂಧನ
ಸಾಂದರ್ಭಿಕ ಚಿತ್ರ
ರಾಂಚಿ : ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಜಾರ್ಖಂಡ್ ಗೆ ಎರಡು ದಿನಗಳ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆ ವಾಹನಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಮಹಿಳೆಯೋರ್ವಳನ್ನು ರಾಂಚಿ ಪೋಲಿಸರು ಬಂಧಿಸಿದ್ದಾರೆ.
ಪೋಲಿಸರು ಧನಬಾದ್ ಎಸಿಬಿ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಪಾಸ್ವಾನ್ ಅವರ ಹೇಳಿಕೆಯನ್ನು ಆಧರಿಸಿ ಸಂಗೀತಾ ಝಾ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪ್ರಧಾನಿಯವರ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಎನ್ಎಸ್ಜಿ ಘಟನೆಯ ಬಳಿಕ ರಾಂಚಿ ಪೋಲಿಸರಿಂದ ವರದಿಯನ್ನು ಕೇಳಿತ್ತು.
ಪ್ರಧಾನಿಯವರ ಬೆಂಗಾವಲು ವಾಹನಗಳ ಸಾಲು ಭಗವಾನ ಬಿರ್ಸಾ ಮುಂಡಾ ಸ್ಮಾರಕ ವಸ್ತುಸಂಗ್ರಹಾಲಯದ ಮುಂದೆ ಸಾಗುತ್ತಿದ್ದಾಗ ಸಂಗೀತಾ ಝಾ ಏಕಾಏಕಿ ಅವುಗಳ ಮುಂದೆ ಜಿಗಿದಿದ್ದರು. ಪ್ರಧಾನಿ ಭದ್ರತೆಗೆ ನಿಯೋಜಿತರಾಗಿದ್ದ ಭದ್ರತಾ ಪಡೆಗಳು ಆಕೆಯನ್ನು ತಕ್ಷಣ ಹಿಡಿದು ವಶಕ್ಕೆ ತೆಗೆದುಕೊಂಡಿದ್ದರು. ಮಹಿಳೆ ಮೋದಿಯವರನ್ನು ಭೇಟಿಯಾಗಲು ಉತ್ಸುಕಳಾಗಿದ್ದಳು ಎಂದು ಹೇಳಲಾಗಿದೆ.
ಪ್ರಧಾನಿಯ ಭದ್ರತೆಗೆ ಸಂಬಂಧಿಸಿದಂತೆ ಲೋಪಕ್ಕಾಗಿ ಮೂವರು ಪೋಲಿಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.