ದರ ಏರಿಸಿದ ಜಿಯೋ, ಏರ್ಟೆಲ್; ಇನ್ನು ಮುಂದೆ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ದುಬಾರಿ!
ಜಿಯೋ, ಏರ್ಟೆಲ್ | PC : X
ಹೊಸದಿಲ್ಲಿ: ರಿಲಯನ್ಸ್ ಜಿಯೋ ಮತ್ತು ಭಾರತಿ ಏರ್ಟೆಲ್ ತಮ್ಮ ಶುಲ್ಕಗಳನ್ನು ಗಣನೀಯವಾಗಿ ಏರಿಕೆ ಮಾಡಿವೆ.
ಜಿಯೋ ತನ್ನ ಶುಲ್ಕಗಳಲ್ಲಿ ಶೇ 12-25ರಷ್ಟು ಏರಿಕೆಯನ್ನು ಗುರುವಾರ ಘೋಷಿಸಿದ್ದರೆ, ಏರ್ಟೆಲ್ ಶುಲ್ಕ ಏರಿಕೆಯನ್ನು ಇಂದು ಘೋಷಿಸಿದೆ. 2021ರಿಂದೀಚೆಗೆ ಮೊಬೈಲ್ ಸೇವಾ ಪೂರೈಕೆದಾರರು ಶುಲ್ಕ ಏರಿಸಿದ್ದು ಇದೇ ಮೊದಲ ಬಾರಿಯಾಗಿದೆ. 5ಜಿ ಸೇವೆಗಳಲ್ಲಿ ಮಾಡಲಾಗಿರುವ ಹೂಡಿಕೆಗಳು ಬೆಲೆ ಏರಿಕೆಯನ್ನು ಈ ಕಂಪನಿಗಳಿಗೆ ಅನಿವಾರ್ಯವಾಗಿಸಿದೆ.
ಜಿಯೋ ದರ ಏರಿಕೆ: ಜುಲೈ 3ರಿಂದ ಜಿಯೋ ಹೊಸ ದರಗಳು ಅನ್ವಯವಾಗಲಿವೆ. ಇದು ಜಿಯೋ ಸಿಮ್ ಹೊಂದಿರುವ 427 ಮಿಲಿಯನ್ ಗ್ರಾಹಕರನ್ನು ಬಾಧಿಸಲಿದೆ. ರೂ 155ರ ಪ್ಲಾನ್ ಬೆಲೆ ಜುಲೈ 3ರಿಂದ ರೂ 189 ಆಗಲಿದ್ದರೆ ಜನಪ್ರಿಯ ಮಾಸಿಕ ಪ್ಲಾನ್ ಈಗ ರೂ. 239 ಗೆ ಹಾಗೂ ಪ್ರತಿ ದಿನ 1.5 ಜಿಬಿ ಒದಗಿಸುತ್ತಿದ್ದರೆ ಜುಲೈ 3ರಿಂದ ಈ ಪ್ಲಾನ್ ಬೆಲೆ ರೂ. 299 ಆಗಲಿದೆ. ವಾರ್ಷಿಕ ಪ್ಯಾಕೇಜ್ ಶುಲ್ಕ ಈಗಿನ ರೂ 2,999 ಬದಲು ರೂ 3,599 ಆಗಲಿದೆ.
ದರ ಹೆಚ್ಚಳ ಜಾರಿಯಾದ ನಂತರ ಅನಿಯಮಿತ 5ಜಿ ಡೇಟಾವು ದೈನಂದಿನ 2ಜಿಬಿ ಡೇಟಾ ಅಥವಾ ಹೆಚ್ಚು ಹೊಂದಿರುವ ಪ್ಲಾನ್ಗಳಿಗೆ ಮಾತ್ರ ಅನ್ವಯವಾಗಲಿದೆ.
ಏರ್ಟೆಲ್ ಪರಿಷ್ಕೃತ ದರಗಳು
ಏರ್ಟೆಲ್ ಹೊಸ ದರಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಎರಡಕ್ಕೂ ಅನ್ವಯವಾಗಲಿದೆ. ರೂ 179 ಮಾಸಿಕ ಪ್ಲಾನ್ ದರ ರೂ 199 ಆಗಲಿದೆ. ಇದು 2ಜಿಬಿ ಡೇಟಾ ಪ್ರತಿ ದಿನ, ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಒದಗಿಸುತ್ತದೆ. ರೂ 1,799 ವಾರ್ಷಿಕ ಯೋಜನೆಯ ದರ ರೂ 1999 ಆಗಲಿದೆ. ದೈನಂದಿನ ಡೇಟಾ ಆಡ್-ಆನ್ ಪ್ಲಾನ್ ಹಿಂದಿನ ರೂ. 19 ಬದಲು ರೂ 22ಗೆ ಏರಿಕೆಯಾಗಲಿದೆ.
ಪೋಸ್ಟ್ಪೇಯ್ಡ್ ಪ್ಲಾನ್ಗಳು ರೂ 449ರಿಂದ ರೂ 1,199ಗೆ ಲಭ್ಯವಿರಲಿವೆ. ದೈನಂದಿನ ಡೇಟಾ ಪ್ಲಾನ್ ರೂ. 265ರಿಂದ ಆರಂಭಗೊಳ್ಳಲಿವೆ.