ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೀಡಲಾಗುವುದು: ನ್ಯಾಯಾಲಯ
ಜ್ಞಾನವಾಪಿ ಮಸೀದಿ| Photo: PTI
ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿಯ ಪ್ರತಿ (ಹಾರ್ಡ್ ಕಾಪಿ) ಅನ್ನು ಅರ್ಜಿದಾರರಿಗೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೆ ಒದಗಿಸಲಾಗುವುದು ಎಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಹೇಳಿದ್ದಾರೆ. ಆದರೆ ಸಮೀಕ್ಷಾ ವರದಿಯನ್ನು ಈಗ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲ.
ವರದಿಯನ್ನು ನ್ಯಾಯಾಲಯಕ್ಕೆ ಸೀಲ್ ಮಾಡಿದ ಲಕೋಟೆಯಲ್ಲಿ ಒಂದು ತಿಂಗಳ ಹಿಂದೆಯೇ ಸಲ್ಲಿಸಲಾಗಿತ್ತು. ನ್ಯಾಯಾಲಯಕ್ಕೆ ಸಂಬಂಧಿತರ ಅರ್ಜಿ ಸಲ್ಲಿಸಿದ ನಂತರ ಸಮೀಕ್ಷಾ ವರದಿಯ ಫೋಟೋಕಾಪಿಗಳನ್ನು ಅವರಿಗೆ ನೀಡಲಾಗುವುದು.
ವರದಿಯನ್ನು ಸಾರ್ವಜನಿಕರ ಮುಂದೆ ನಂತರ ಇಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಜ್ಞಾನವಾಪಿ ಮಸೀದಿಯನ್ನು ದೇವಳ ನೆಲಸಮಗೊಳಿಸಿ ನಿರ್ಮಿಸಲಾಗಿದೆ ಅಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಕಳೆದ ವರ್ಷದ ಆಗಸ್ಟ್ 4ರಿಂದ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸೀಲ್ ಮಾಡಲಾಗಿರುವ ವುಝುಖಾನ ಪ್ರದೇಶವನ್ನು ಮಾತ್ರ ಸಮೀಕ್ಷೆ ಮಾಡಲಾಗಿಲ್ಲ.
ಹಲವಾರು ಗಡುವು ವಿಸ್ತರಣೆಗಳ ನಂತರ ಜುಲೈ 21ರಂದು ವರದಿ ಸಲ್ಲಿಸಲಾಗಿತ್ತು. ಈ ಮಸೀದಿಯನ್ನು ದೇವಳ ಒಡೆದು ನಿರ್ಮಿಸಲಾಗಿದೆಯೇ ಎಂದು ತಿಳಿಯಲು ಸಮೀಕ್ಷೆಯೊಂದೇ ಮಾರ್ಗವಾಗಿದೆ ಎಂದು ಅರ್ಜಿದಾರ ನಾಲ್ಕು ಮಹಿಳೆಯರು ವಾದಿಸಿದ್ದ ನಂತರ ಕೋರ್ಟ್ ಆದೇಶ ಹೊರಬಿದ್ದಿತ್ತು.
ಕಳೆದ ವರ್ಷದ ಎಪ್ರಿಲ್ನಲ್ಲಿ ನ್ಯಾಯಾಲಯವು ಮಸೀದಿ ಆವರಣದ ವೀಡಿಯೋ ಸಮೀಕ್ಷೆಗೆ ಆದೇಶಿಸಿತ್ತು. ಮೇ ತಿಂಗಳಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ವುಝುಖಾನ ಪ್ರದೇಶದಲ್ಲಿ ಪತ್ತೆಯಾದ ಒಂದು ರಚನೆಯು ಶಿವಲಿಂಗ ಎಂದು ಅರ್ಜಿದಾರರು ವಾದಿಸಿದ್ದರು.