ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ ಟಿ ವಾಸುದೇವನ್ ನಾಯರ್ ನಿಧನ
PC: x.com/rajaputthiran
ಕೋಝಿಕ್ಕೋಡ್: ಖ್ಯಾತ ಮಲಯಾಳಂ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ ಟಿ ವಾಸುದೇವನ್ ನಾಯರ್ (91) ಬುಧವಾರ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಹೃದ್ರೋಗ ಮತ್ತು ಉಸಿರಾಟದ ತೊಂದರೆಯಿಂದ 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಅವರ ಚಿಕಿತ್ಸೆಗಾಗಿ ವಿಶೇಷ ವೈದ್ಯಕೀಯ ತಂಡವನ್ನೂ ರಚಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮೂತ್ರಪಿಂಡ ಮತ್ತು ಹೃದಯ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉಸಿರಾಟ ವೈಫಲ್ಯದಿಂದ ನ.15ರಂದು ಆಸ್ಪತ್ರೆಗೆ ದಾಖಲಾಗಿದ್ದ ವಾಸುದೇವನ್ ಅವರು ಒಂದು ತಿಂಗಳ ಅವಧಿಯಲ್ಲಿ ಹಲವು ಬಾರಿ ಆಸ್ಪತ್ರೆ ಸೇರಿದ್ದರು. ಜುಲೈ 15, 1933 ರಂದು ಕೂಡಲ್ಲೂರಿನಲ್ಲಿ ಟಿ. ಎಂಟಿ ನಾರಾಯಣನ್ ನಾಯರ್ ಮತ್ತು ಅಮ್ಮಾಳು ದಂಪತಿಯ ಮಗನಾಗಿ ಜನಿಸಿದರು.
ಏಳು ದಶಕಗಳಲ್ಲಿ ಕಾದಂಬರಿ, ಸಣ್ಣ ಕಥೆ, ಚಿತ್ರಕಥೆ, ನಾಟಕ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಲೇಖನ ಹೀಗೆ ಬರವಣಿಗೆಯ ಎಲ್ಲಾ ಪ್ರಕಾರಗಳಲ್ಲೂ, ತಮ್ಮ ಛಾಪು ಮೂಡಿಸಿರುವ ಎಂ.ಟಿ.ಯವರು ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು. 6 ಚಲನಚಿತ್ರಗಳು ಮತ್ತು ಎರಡು ಸಾಕ್ಷ್ಯಚಿತ್ರಗಳನ್ನೂ ಎಂ.ಟಿ. ನಿರ್ದೇಶಿಸಿದ್ದಾರೆ.
ಜ್ಞಾನಪೀಠ ವಿಜೇತ ಎಂ.ಟಿ. ಅವರಿಗೆ 2005ರಲ್ಲಿ ಸರಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೆ.ಸಿ. ಡೇನಿಯಲ್ ಪ್ರಶಸ್ತಿ, ಎಝುತಚ್ಚನ್ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಳ್ಳತ್ತೋಳ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.
ನಾಲ್ಕು ಬಾರಿ ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಮೂರು ಬಾರಿ ಅತ್ಯುತ್ತಮ ನಿರ್ದೇಶಕರಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಎಂ.ಟಿ. ಅವರು 11 ಬಾರಿ ಅತ್ಯುತ್ತಮ ಚಿತ್ರಕಥೆಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೃತ ಎಂ ಟಿ ವಾಸುದೇವನ್ ನಾಯರ್ ಅವರು ಪತ್ನಿ ಕಲಾಮಂಡಲಂ ಸರಸ್ವತಿ, ಮಕ್ಕಳು ಸಿತಾರಾ ಅಶ್ವತಿ ಸಹಿತ ಅಪಾರ ಬಂಧುಗಳನ್ನು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.