ಫೆಲೆಸ್ತೀನ್, ಲೆಬನಾನ್, ಇರಾನ್ ರಾಯಭಾರಿಗಳ ಸೆಮಿನಾರ್ ಗಳನ್ನು ರದ್ದುಗೊಳಿಸಿದ ಜೆಎನ್ಯು
ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಮಧ್ಯಪ್ರಾಚ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಜವಾಹರಲಾಲ್ ನೆಹರೂ ವಿವಿ(JNU) ʼಪಶ್ಚಿಮ ಏಷ್ಯಾ ಅಧ್ಯಯನ ಕೇಂದ್ರʼದಲ್ಲಿ ನಡೆಯಬೇಕಿದ್ದ ಮೂರು ವಿಚಾರಗೋಷ್ಠಿಗಳನ್ನು ರದ್ದುಗೊಳಿಸಲಾಗಿದೆ.
ವಿಚಾರಗೋಷ್ಠಿಯಲ್ಲಿ ಇರಾನ್, ಫೆಲೆಸ್ತೀನ್ ಮತ್ತು ಲೆಬನಾನಿನ ರಾಯಭಾರಿಗಳು ಪ್ರತ್ಯೇಕವಾಗಿ ಮಾತನಾಡಬೇಕಿತ್ತು. ಆದರೆ ಮೂರು ವಿಚಾರಗೋಷ್ಠಿಗಳನ್ನು ಕೂಡ ರದ್ದುಗೊಳಿಸಲಾಗಿದೆ.
ಇರಾನ್ ರಾಯಭಾರಿ ಡಾ. ಇರಾಜ್ ಇಲಾಹಿ ಅವರು ʼಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಇರಾನ್ ಹೇಗೆ ನೋಡುತ್ತದೆ" ಎಂಬ ವಿಚಾರದಲ್ಲಿ ಸೆಮಿನಾರ್ ಅನ್ನು ಉದ್ದೇಶಿಸಿ ಮಾತನಾಡಲು ಗುರುವಾರ ಬೆಳಿಗ್ಗೆ 11 ಗಂಟೆಗೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಗುರುವಾರ 8 ಗಂಟೆಗೆ ಸೆಮಿನಾರ್ ಸಂಯೋಜಕರಾದ ಸಿಮಾ ಬೈದ್ಯ ಕಾರ್ಯಕ್ರಮ ರದ್ದುಗೊಳಿಸಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಈಮೇಲ್ ಮೂಲಕ ಮಾಹಿತಿ ನೀಡಿದ್ದಾರೆ.
ಅದೇ ಈಮೇಲ್ ನಲ್ಲಿ, ಫೆಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್-ಹೈಜಾ ಅವರು ಮಾತನಾಡಲಿದ್ದ ಫೆಲೆಸ್ತೀನ್ ಹಿಂಸಾಚಾರದ ಕುರಿತ ನ.7ರ ಸೆಮಿನಾರ್ ಮತ್ತು ಲೆಬನಾನ್ನಲ್ಲಿನ ಪರಿಸ್ಥಿತಿಯ ಕುರಿತು ಲೆಬನಾನಿನ ರಾಯಭಾರಿ ಡಾ ರಾಬಿ ನಾರ್ಶ್ ನವೆಂಬರ್ 14 ರಂದು ಮಾತನಾಡಲಿದ್ದ ಸೆಮಿನಾರ್ ನ್ನು ರದ್ದುಗೊಳಿಸಿರುವುದಾಗಿ ಬೈದ್ಯ ಹೇಳಿದ್ದಾರೆ.
ಸೆಮಿನಾರ್ ರದ್ದುಗೊಳಿಸುವ ನಿರ್ಧಾರವನ್ನು ವಿಶ್ವವಿದ್ಯಾನಿಲಯವು ತೆಗೆದುಕೊಂಡಿದೆ. ಆದರೆ, ಯಾಕೆ ರದ್ದುಗೊಳಿಸಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ಇರಾನ್ ಮತ್ತು ಲೆಬನಾನಿನ ರಾಯಭಾರಿ ಕಚೇರಿಗಳ ಮೂಲಗಳು ತಿಳಿಸಿರುವ ಬಗ್ಗೆ indianexpress.com ವರದಿ ಮಾಡಿದೆ.