‘ರಾಷ್ಟ್ರವಿರೋಧಿ’ ಗೋಡೆ ಬರಹಗಳ ಮೇಲೆ ಕಣ್ಣಿಡಲು ಸಿಸಿಟಿವಿ ಅಳವಡಿಸಲಿರುವ ಜೆಎನ್ ಯು
Photo: NDTV
ಹೊಸದಿಲ್ಲಿ: ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ಪದೇ ಪದೇ ‘ದೇಶ ವಿರೋಧಿ’ ಘೋಷಣೆಗಳನ್ನು ಗೀಚುತ್ತಿರುವವರ ಮೇಲೆ ಕಣ್ಣಿಡಲು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿಶ್ವವಿದ್ಯಾಲಯದ ಆವರಣದ ಯಾವ ಯಾವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬಹುದು ಎಂಬ ಬಗ್ಗೆ ಸಮೀಕ್ಷೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಭಾಷಾ ಶಾಲೆಯ ಗೋಡೆಗಳ ಮೇಲೆ ಇತ್ತೀಚೆಗೆ ಕೆಲವು ಘೋಷಣೆಗಳನ್ನು ಗೀಚಲಾಗಿದೆ ಎಂಬ ಮುಖ್ಯ ಭದ್ರತಾ ಅಧಿಕಾರಿಯ ವರದಿಯನ್ನು ಆಧರಿಸಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಆರ್ಎಸ್ಎಸ್ನೊಂದಿಗೆ ಸಂಬಂಧ ಹೊಂದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೂರು ನೀಡಿದ ನಂತರ ರವಿವಾರ ಈ ಘಟನೆಯು ಬೆಳಕಿಗೆ ಬಂದಿದೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರೆಕ್ಟರ್ ಪ್ರಾಧ್ಯಾಪಕ ಸತೀಶ್ ಚಂದ್ರ ಗರ್ಕೋಟಿ, “ರವಿವಾರದ ಘಟನೆಯ ಕುರಿತು ಮುಖ್ಯ ಭದ್ರತಾ ಅಧಿಕಾರಿಯಿಂದ ವರದಿಯೊಂದನ್ನು ನಾವು ಸ್ವೀಕರಿಸಿದ್ದೇವೆ. ಈ ವರದಿಯನ್ನು ಆಧರಿಸಿ, ವಿಶ್ವವಿದ್ಯಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬಹುದಾದ ಕಾರ್ಯಸಾಧು ಸ್ಥಳಗಳ ಬಗ್ಗೆ ನಾವು ಸಮೀಕ್ಷೆ ನಡೆಸಲಿದ್ದೇವೆ. ನಮ್ಮದು ದೊಡ್ಡ ಆವರಣವಾಗಿರುವುದರಿಂದ ಕಾರ್ಯಸಾಧ್ಯತೆಯನ್ನು ಆಧರಿಸಿ ಇನ್ನಿತರ ಕ್ರಮಗಳನ್ನೂ ಜಾರಿಗೊಳಿಸುವ ಕುರಿತು ಪರಿಗಣಿಸಲಾಗುವುದು” ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳೇ ಇಂತಹ ಕತೆಗಳನ್ನು ಸೃಷ್ಟಿಸಿ, ಅವರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ ಎಂದು ಆರೋಪಿಸಿರುವ ಅವರು, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮುನ್ನ ತಾವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಎಂದೂ ಹೇಳಿದ್ದಾರೆ.
“ಹೀಗಿದ್ದೂ, ಈ ವಿಷಯವನ್ನು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಸಾಧ್ಯವಿರುವ ಎಲ್ಲ ಕ್ರಮಗಳನ್ನು ಜಾರಿಗೊಳಿಸಲಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
ಆಡಳಿತ ಮಂಡಳಿ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡಿರುವ ಸಮಿತಿಯೊಂದನ್ನು ಆಡಳಿತ ಮಂಡಳಿಯು ರಚಿಸಲಿದ್ದು, ಈ ಸಮಿತಿಯು ವಿಶ್ವವಿದ್ಯಾಲಯದ ಆವರಣದಲ್ಲಿ ಇಂತಹ ಘಟನೆಗಳನ್ನು ಮಟ್ಟ ಹಾಕುವ ಕುರಿತು ನಿರ್ಧರಿಸಲಿದೆ.
ವಿಶ್ವವಿದ್ಯಾಲಯದ ಆವರಣದೊಳಗಿರುವ ಎಲ್ಲ ಶಾಲೆಗಳು ಹಾಗೂ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ವಿಶ್ವವಿದ್ಯಾಲಯವು ಸೂಚಿಸಿತ್ತು.
ಆದರೆ, ಇದು ಖಾಸಗಿತನದ ಮೇಲಿನ ಆಕ್ರಮಣವೆಂದು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯು ವಿರೋಧಿಸುತ್ತಿದೆ.