ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಅಸಾಂವಿಧಾನಿಕ : ಶಶಿ ತರೂರ್
ಶಶಿ ತರೂರ್ | PC : NDTV
ತಿರುವನಂತಪುರ : ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಕಡ್ಡಾಯಗೊಳಿಸಿ ತನ್ನದೇ ಪಕ್ಷದ ಆಡಳಿತವಿರುವ ಕರ್ನಾಟಕದ ಮಸೂದೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಲೋಕಸಭಾ ಸಂಸದ ಶಶಿ ತರೂರ್ ಶುಕ್ರವಾರ ಟೀಕಿಸಿದರು. ವಿಧೇಯಕವನ್ನು ‘ಅಸಾಂವಿಧಾನಿಕ’ ಮತ್ತು ‘ಅವಿವೇಕದ್ದು’ ಎಂದು ಬಣ್ಣಿಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರವು ನಿರ್ಧಾರವನ್ನು ತಡೆಹಿಡಿದಿರುವುದನ್ನು ಸ್ವಾಗತಿಸಿದರು.
‘ಅದು ವಿವೇಕಯುತ ನಿರ್ಧಾರವಾಗಿರಲಿಲ್ಲ. ಪ್ರತಿಯೊಂದೂ ರಾಜ್ಯವು ಇಂತಹ ಕಾನೂನನ್ನು ತಂದರೆ ಅದು ಸಂವಿಧಾನ ವಿರೋಧಿಯಾಗುತ್ತದೆ. ಸಂವಿಧಾನದ ಪ್ರಕಾರ ಪ್ರತಿಯೋರ್ವ ಪ್ರಜೆಯೂ ಭಾರತದ ಯಾವುದೇ ಭಾಗದಲ್ಲಿ ವಾಸವಾಗಿರುವ, ಕೆಲಸ ಮಾಡುವ ಮತ್ತು ಮುಕ್ತವಾಗಿ ಪ್ರಯಾಣಿಸುವ ಹಕ್ಕನ್ನು ಹೊಂದಿದ್ದಾನೆ ’ಎಂದು ತರೂರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹರ್ಯಾಣ ಸರಕಾರವು ಇಂತಹುದೇ ವಿಧೇಯಕವನ್ನು ತರಲು ಪ್ರಯತ್ನಿಸಿದ್ದಾಗ ಸರ್ವೋಚ್ಚ ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು ಎಂದ ತರೂರ್, ಯಾವ ಆಧಾರದಲ್ಲಿ ಕರ್ನಾಟಕ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನುವುದು ತನಗೆ ಅರ್ಥವಾಗುತ್ತಿಲ್ಲ. ಇಂತಹ ಕಾನೂನನ್ನು ಜಾರಿಗೊಳಿಸಿದರೆ ರಾಜ್ಯದಲ್ಲಿಯ ಉದ್ಯಮಗಳು ತಮಿಳುನಾಡು ಮತ್ತು ಕೇರಳದಂತಹ ನೆರೆರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತವೆ ಎಂದು ಹೇಳಿದರು.