ನಾಸಾ ಜತೆ ಜಂಟಿ ಮಿಷನ್: ಬಾಹ್ಯಾಕಾಶ ಯಾನಕ್ಕೆ ಇಸ್ರೋ ಗಗನಯಾತ್ರಿ
Photo: X.com/NASA/ISRO
ಹೊಸದಿಲ್ಲಿ: ನಾಸಾ ಜತೆಗಿನ ಸಹಯೋಗದಲ್ಲಿ ಇಸ್ರೋ ಗಗನಯಾತ್ರಿಯೊಬ್ಬರು ಸದ್ಯದಲ್ಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಗೆ ಯಾನ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಬಾಹ್ಯಾಕಾಶ ಖಾತೆ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. "ಇದು ಇಸ್ರೋ, ನಾಸಾ ಮತ್ತು ನಾಸಾ ಗುರುತಿಸಿದ ಖಾಸಗಿ ಸಂಸ್ಥೆ ಆ್ಯಕ್ಸಿಯಾಮ್ ಸ್ಪೇಸ್ ಸಹಭಾಗಿತ್ವದ ಪ್ರಯತ್ನವಾಗಿದ್ದು, ಐಎಸ್ಎಸ್ ಗೆ ತೆರಳುವ ಜಂಟಿ ಮಿಷನ್ ಗೆ ಸಂಬಂಧಿಸಿದಂತೆ ಇಸ್ರೋ, ಆ್ಯಕ್ಸಿಯಾಮ್ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಸುಗತಾ ರಾಯ್ ಅವರು "ಆ್ಯಕ್ಸಿಯಾಮ್-4ಮಿಷನ್" ಬಾಹ್ಯಾಕಾಶ ಯಾನ ಮತ್ತು ಗಗನಯಾನ ಮಿಷನ್ ಬಗ್ಗೆ ಸ್ಪಷ್ಟನೆ ಕೇಳಿದ್ದರು. ಐಎಸ್ಎಸ್ಗೆ ನಾಲ್ಕನೇ ಬಾಹ್ಯಾಕಾಶ ಯಾನಿಯನ್ನು ಕಳುಹಿಸುವ ಸಂಬಂಧ ಆ್ಯಕ್ಸಿಯಾಮ್ ಸ್ಪೇಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ನಾಸಾ ಪ್ರಕಟಿಸಿದೆ. ಈ ಮಿಷನ್ 2024ರ ಆಗಸ್ಟ್ ನಲ್ಲಿ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ ನಿಂದ ಆರಂಭವಾಗಲಿದೆ ಎಂದು ನಾಸಾ ಹೇಳಿದೆ. ಗಗನಯಾನ ಮಿಷನ್ ಗೆ ತರಬೇತಿ ಪಡೆದಿರುವ ಭಾರತೀಯ ವಾಯು ಪಡೆಯ ನಾಲ್ವರು ಪೈಲಟ್ ಗಳ ಪೈಕಿ ಒಬ್ಬರು ಈ ಯಾನ ಕೈಗೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಇಸ್ರೋ ರಚಿಸಿದ ಬಾಹ್ಯಾಕಾಶ ಯಾನಿ ಆಯ್ಕೆ ಸಮಿತಿ, ಐಎಎಫ್ ಪರೀಕ್ಷಿತ ಪೈಲಟ್ ಗಳಿಂದ ನಾಲ್ಕು ಮಂದಿಯನ್ನು ಆಯ್ಕೆ ಮಾಡಿತ್ತು. ಎಲ್ಲ ನಾಲ್ಕು ಮಂದಿಗೂ ಕೋವಿಡ್-19 ಸಾಂಕ್ರಾಮಿಕದ ವೇಳೆ ರಷ್ಯಾದ ಮೂಲ ಮಾಡ್ಯೂಲ್ ನಲ್ಲಿ ತರಬೇತಿ ನೀಡಲಾಗಿತ್ತು.