ಕಾಶ್ಮೀರಿ ಪತ್ರಕರ್ತನ ಬಂಧನಕ್ಕೆ ಹೈಕೋರ್ಟ್ ಅಸಮಾಧಾನ: 5 ವರ್ಷಗಳ ಬಳಿಕ ಜೈಲಿನಿಂದ ಹೊರ ಬಂದ ಆಸಿಫ್ ಸುಲ್ತಾನ್
ಆಸಿಫ್ ಸುಲ್ತಾನ್ (Photo: Kashmir Narrator)
ಶ್ರೀನಗರ: ಶ್ರೀನಗರ: ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್ ಬಂಧನದ ವೇಳೆ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅವರ ಬಂಧನ ಆದೇಶ ರದ್ದುಗೊಳಿಸಿದ ಎರಡು ತಿಂಗಳ ನಂತರ ಮಂಗಳವಾರ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಕಾರಾಗೃಹದಿಂದ ಅವರು ಬಿಡುಗಡೆಗೊಂಡಿದ್ದಾರೆ.
ಆಸಿಫ್ ಸುಲ್ತಾನ್ ಕಳೆದ ಐದು ವರ್ಷದಿಂದ ಜೈಲಿನಲ್ಲಿದ್ದರು.
ಕಾಶ್ಮೀರದ ಗೃಹ ಇಲಾಖೆ ಹಾಗೂ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ನಿರಾಕ್ಷೇಪಣಾ ಪತ್ರಗಳನ್ನು ನಿರೀಕ್ಷಿಸುತ್ತಿದ್ದುದರಿಂದ ಹೈಕೋರ್ಟ್ ಆದೇಶದ ಹೊರತಾಗಿಯೂ ಸುಲ್ತಾನ್ ಅವರನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿರಲಿಲ್ಲ ಎಂದು ವರದಿಯಾಗಿದೆ.
ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿ ಆಗಸ್ಟ್ 2018ರಿಂದ ಜೈಲಿನಲ್ಲಿರುವ ಆಸಿಫ್ ಸುಲ್ತಾನ್ ಅವರಿಗೆ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದ ಮರುದಿನವೇ ಪ್ರತಿಬಂಧಕ ವಶ ಕಾಯ್ದೆಯನ್ವಯ ಎಪ್ರಿಲ್ 2022ರಲ್ಲಿ ಅವರನ್ನು ಮರಳಿ ವಶಕ್ಕೆ ಪಡೆಯಲಾಗಿತ್ತು.
ಸುಲ್ತಾನ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ವಶಕ್ಕೆ ಪಡೆದಿರುವುದನ್ನು ಡಿಸೆಂಬರ್ 11ರಂದು ರದ್ದುಗೊಳಿಸಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಅವರನ್ನು ವಶಕ್ಕೆ ಪಡೆಯುವಾಗ ಪತ್ರದಲ್ಲಿರಬೇಕಾದ ನಿಯಮಾವಳಿಗಳ ಅಗತ್ಯತೆ ತಿಳಿಸಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು.