ಛತ್ತೀಸ್ ಗಢ | ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ ಪತ್ರಕರ್ತನ ಮೃತದೇಹ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪತ್ತೆ
ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ (Photo credit: indiatoday.in)
ರಾಯ್ಪುರ: ಛತ್ತೀಸ್ ಗಢದ ಬಿಜಾಪುರದಲ್ಲಿ ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಕೆಲವೇ ದಿನಗಳಲ್ಲಿ ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಸಂಘರ್ಷದ ಕುರಿತು ವರದಿ ಮಾಡಿ ಮನ್ನಣೆ ಗಳಿಸಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಹೆದ್ದಾರಿ ಯೋಜನೆಯಲ್ಲಿನ ಹಗರಣದ ಕುರಿತು ಇತ್ತೀಚೆಗೆ ವರದಿಯನ್ನು ಮಾಡಿದ್ದರು. ಹೆದ್ದಾರಿ ಯೋಜನೆಯಲ್ಲಿನ ಹಗರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ಮೃತ ಪತ್ರಕರ್ತನ ಕುಟುಂಬವು ಆರೋಪಿಸಿದೆ.
ಜ.1ರಂದು ಮನೆಯಿಂದ ತೆರಳಿದ್ದ ಮುಖೇಶ್ ಚಂದ್ರಕರ್ ಆ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ಮನೆಗೆ ವಾಪಾಸ್ಸಾಗದಿದ್ದಾಗ ಅವರ ಸಹೋದರ ಯುಕೇಶ್ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರನ್ನು ನೀಡಿದ್ದರು.
ಮುಕೇಶ್ ನಾಪತ್ತೆ ಹಿನ್ನೆಲೆ ಪೊಲೀಸರು ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಮನೆಯ ಅಂಗಳದಲ್ಲಿ ಕೊನೆಯ ಬಾರಿಗೆ ಅವರ ಮೊಬೈಲ್ ನೆಟ್ ವರ್ಕ್ ತೋರಿಸಿತ್ತು. ಸ್ಥಳಕ್ಕೆ ತೆರಳಿ ಹೆಚ್ಚಿನ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಸೆಪ್ಟಿಕ್ ಟ್ಯಾಂಕ್ನಲ್ಲಿ ಮುಕೇಶ್ ಅವರ ಮೃತದೇಹ ಪತ್ತೆಯಾಗಿತ್ತು. ಮುಕೇಶ್ ಅವರ ಮೃತದೇಹವು ಊದಿಕೊಂಡಿದ್ದು, ತಲೆ ಮತ್ತು ಬೆನ್ನಿನ ಮೇಲೆ ಗಾಯಗಳು ಕಂಡು ಬಂದಿದೆ. ಮುಖೇಶ್ ಧರಿಸಿದ್ದ ಬಟ್ಟೆಯಿಂದ ಮೃತದೇಹವನ್ನು ಗುರುತಿಸಲಾಗಿದೆ.
ಮುಖೇಶ್ ಚಂದ್ರಕರ್ ಅವರು 1.59 ಲಕ್ಷ ಚಂದಾದಾರರನ್ನು ಹೊಂದಿದ್ದ ʼಬಸ್ತಾರ್ ಜಂಕ್ಷನ್ʼ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಬಸ್ತಾರ್ ಪ್ರದೇಶದಲ್ಲಿನ ನಿರ್ಣಾಯಕ ಸಮಸ್ಯೆಗಳ ಬಗ್ಗೆ ಅವರು ವರದಿ ಮಾಡುತ್ತಿದ್ದರು.