ಮಣಿಪುರದ ಪತ್ರಕರ್ತರು ಏಕಪಕ್ಷೀಯ ವರದಿಗಾರಿಕೆ ಮಾಡಿದ್ದರು; ಎಡಿಟರ್ಸ್ ಗಿಲ್ಡ್ನ ಸತ್ಯಶೋಧನಾ ತಂಡದ ವರದಿ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಕುರಿತು ವರದಿಗಾರಿಕೆ ಮಾಡುವಾಗ ಅಲ್ಲಿಯ ಪತ್ರಕರ್ತರು ಏಕಪಕ್ಷೀಯ ವರದಿಗಳನ್ನು ಬರೆದಿದ್ದರು ಎಂದು ಶನಿವಾರ ಬಿಡುಗಡೆಗೊಂಡ ಎಡಿಟರ್ಸ್ ಗಿಲ್ಡ್ನ ಸತ್ಯಶೋಧನಾ ತಂಡವು ತನ್ನ ವರದಿಯಲ್ಲಿ ಹೇಳಿದೆ.
ಸಾಮಾನ್ಯ ಸಂದರ್ಭಗಳಲ್ಲಿ ಪತ್ರಿಕೆಗಳ ಸಂಪಾದಕರು ಅಥವಾ ಸ್ಥಳೀಯಾಡಳಿತದ ಸ್ಥಳೀಯ ಬ್ಯೂರೊಗಳ ಮುಖ್ಯಸ್ಥರು,ಪೊಲೀಸರು ಮತ್ತು ಭದ್ರತಾ ಪಡೆಗಳು ಈ ವರದಿಗಳನ್ನು ಪುನರ್ಪರಿಶೀಲಿಸುತ್ತಾರೆ. ಆದರೆ ಸಂಘರ್ಷದ ಸಮಯದಲ್ಲಿ ಇದು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ವರದಿಯು ಗಮನಿಸಿದೆ.
ಮೈತೆಯಿಗಳು ಮತ್ತು ಕುಕಿಗಳ ನಡುವೆ ಘರ್ಷಣೆಗಳು ಆರಂಭಗೊಂಡಿದ್ದ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಇಂಟರ್ನೆಟ್ ನಿಷೇಧ ಹೇರಲಾಗಿದ್ದರಿಂದ ಮಣಿಪುರದಿಂದ ವರದಿಗಾರಿಕೆ ಕಷ್ಟವಾಗಿತ್ತು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಸಂಗ್ರಹಿಸಲಾಗಿದ್ದ ಸ್ಥಳೀಯ ಸುದ್ಧಿಗಳು ಪರಿಸ್ಥಿತಿಯ ಸಮತೋಲಿತ ನೋಟವನ್ನು ನೀಡುವಷ್ಟಿರಲಿಲ್ಲ ಎನ್ನುವುದನ್ನು ಎಡಿಟರ್ಸ್ ಗಿಲ್ಡ್ ಕಂಡುಕೊಂಡಿದೆ.
ಮೇ 3ರಂದು ಘರ್ಷಣೆಗಳು ಆರಂಭಗೊಂಡ ಬಳಿಕ ಚುರಾಚಂದ್ರಪುರ,ಕಾಂಗ್ಪೊಕ್ಪಿ ಮತ್ತು ತೆಂಗನೌಪಾಲ್ನಂತಹ ಕುಕಿ ಬಹುಸಂಖ್ಯಾತ ಜಿಲ್ಲೆಗಳಿಂದ ತಳಮಟ್ಟದ ವರದಿಗಾರಿಕೆ ನಡೆದಿರಲಿಲ್ಲ ಎಂದು ಮೂವರು ಸದಸ್ಯರ ಸತ್ಯಶೋಧನಾ ತಂಡವು ಹೇಳಿದೆ. ಮೇ ಮಧ್ಯಭಾಗದಿಂದ ಗುಡ್ಡಗಾಡು ಜಿಲ್ಲೆಗಳಲ್ಲಿಯ ತಮ್ಮ ಪ್ರತಿನಿಧಿಗಳು ಫೋನ್ ಕರೆಗಳಿಗೆ ಉತ್ತರಿಸುವುದನ್ನೂ ನಿಲ್ಲಿಸಿದ್ದರು ಎಂದು ಪತ್ರಕರ್ತರು ತನಗೆ ತಿಳಿಸಿದ್ದರು ಎಂದು ಎಡಿಟರ್ಸ್ ಗಿಲ್ಡ್ನೊಂದಿಗೆ ಮಾತನಾಡಿದ ಇಂಫಾಲ್ನ ಹಿರಿಯ ಸಾಮಾಜಿಕ ಧುರೀಣರೋರ್ವರು ಹೇಳಿದರು.
ಇಂಫಾಲ್ನಲ್ಲಿಯ ಸಂಪಾದಕರು ಪರಸ್ಪರರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಸಾಮಾನ್ಯ ನಿರೂಪಣೆಯನ್ನು ಒಪ್ಪಿಕೊಳ್ಳುವುದರೊಂದಿಗೆ ಸಾಮೂಹಿಕವಾಗಿ ಕಾರ್ಯ ನಿರ್ವಹಿಸಿದ್ದರು. ಅದಾಗಲೇ ಉದ್ವಿಗ್ನಗೊಂಡಿದ್ದ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಲು ಅವರು ಬಯಸಿರಲಿಲ್ಲ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಆದಾಗ್ಯೂ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಇಂತಹ ಕಾರ್ಯ ವಿಧಾನದ ಲೋಪವೆಂದರೆ ಅದು ಸುಲಭವಾಗಿ ಸಾಮಾನ್ಯ ಜನಾಂಗೀಯ ನಿರೂಪಣೆಯನ್ನು ರೂಪಿಸುತ್ತದೆ ಹಾಗೂ ಯಾವುದನ್ನು ವರದಿ ಮಾಡಬೇಕು ಮತ್ತು ಯಾವುದನ್ನು ತಡೆಹಿಡಿಯಬೇಕು ಎಂದು ನಿರ್ಧರಿಸುವ ಮೂಲಕ ಪತ್ರಿಕೋದ್ಯಮ ತತ್ತ್ವಗಳ ಸಾಮೂಹಿಕ ಕುಸಿತಕ್ಕೆ ಕಾರಣವಾಗುತ್ತದೆ ಎಂದು ತಂಡದ ವರದಿಯು ಹೇಳಿದೆ.
ಮಾಧ್ಯಮಗಳು ನಕಲಿ ಸುದ್ದಿಗಳನ್ನು ವರದಿ ಮಾಡಿದ್ದ ಮತ್ತು ತಪ್ಪುಮಾಹಿತಿಗಳನ್ನು ಹರಡಿದ್ದ 10ಕ್ಕೂ ಹೆಚ್ಚಿನ ನಿದರ್ಶನಗಳನ್ನು ಬೆಟ್ಟು ಮಾಡಿರುವ ಎಡಿಟರ್ಸ್ ಗಿಲ್ಡ್, ಇಂಫಾಲ ಮಾಧ್ಯಮಗಳಲ್ಲಿ ಮಾತ್ರ ಪ್ರಕಟಗೊಳ್ಳುವ ಸುಳ್ಳುಸುದ್ದಿಗಳ ಮೂಲಕ ಜನಾಂಗೀಯ ವಿಭಜನೆಯು ಹಂತಹಂತವಾಗಿ ಆಳಗೊಳ್ಳುತ್ತಿರುವುದು ಈಗ ಗೋಚರಿಸುತ್ತಿದೆ ಎಂದು ಹೇಳಿದೆ.
ಇಂಫಾಲನಲ್ಲಿಯ ಮಾಧ್ಯಮಗಳು ಭದ್ರತಾ ಪಡೆಗಳನ್ನು,ವಿಶೇಷವಾಗಿ ಅಸ್ಸಾಂ ರೈಫಲ್ಸನ್ನು ದೂಷಿಸಿದ್ದವು ಎಂದು ಹೇಳಿರುವ ವರದಿಯು,ರಾಜ್ಯ ಸರಕಾರವು ಸಹ ಅಸ್ಸಾಂ ರೈಫಲ್ಸ್ ವಿರುದ್ಧ ಎಫ್ಐಆರ್ ದಾಖಲಿಸಲು ಮಣಿಪುರ ಪೋಲಿಸರಿಗೆ ಅವಕಾಶ ನೀಡುವ ಮೂಲಕ ಈ ದೂಷಣೆಯನ್ನು ಮೌನವಾಗಿ ಬೆಂಬಲಿಸಿತ್ತು. ಸರಕಾರದ ಒಂದು ಕೈಗೆ ಇನ್ನೊಂದು ಕೈ ಏನು ಮಾಡುತ್ತಿದೆ ಎನ್ನುವುದು ತಿಳಿದಿರಲಿಲ್ಲ ಅಥವಾ ಇದು ಉದ್ದೇಶಪೂರ್ವಕ ಕ್ರಮವಾಗಿತ್ತು ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಬೆಟ್ಟು ಮಾಡಿದೆ.