ಅತಿಶಿ ವಿರುದ್ಧದ ಮಾನಹಾನಿ ಪ್ರಕರಣ | ವಿಶೇಷ ನ್ಯಾಯಾಧೀಶರು ರಾಜಕೀಯ ವಿಶ್ಲೇಷಕರಂತೆ ವರ್ತಿಸಿದ್ದಾರೆ: ದಿಲ್ಲಿ ಹೈಕೋರ್ಟ್ ಗೆ ಮಾಹಿತಿ

ದಿಲ್ಲಿ ಮುಖ್ಯಮಂತ್ರಿ ಅತಿಶಿ | PTI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಸಲ್ಲಿಸಿದ್ದ ಮಾನಹಾನಿ ಅರ್ಜಿಯನ್ನು ವಜಾಗೊಳಿಸುವ ಮೂಲಕ ವಿಶೇಷ ನ್ಯಾಯಾಧೀಶರು ತಮ್ಮ ವ್ಯಾಪ್ತಿ ಮೀರಿದ ಅಧಿಕಾರವನ್ನು ಚಲಾಯಿಸಿದ್ದು, ರಾಜಕೀಯ ವಿಶ್ಲೇಷಕರಂತೆ ವರ್ತಿಸಿದ್ದಾರೆ ಎಂದು ದೂರುದಾರರು ಸೋಮವಾರ ದಿಲ್ಲಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ದೂರುದಾರ ಪ್ರವೀಣ್ ಶಂಕರ್ ಕಪೂರ್ ಪರವಾಗಿ ನ್ಯಾ. ವಿಕಾಸ್ ಮಹಾಜನ್ ಎದುರು ಹಾಜರಾದ ವಕೀಲರು, ನ್ಯಾಯಾಧೀಶರ ಅಭಿಪ್ರಾಯಗಳಿಗೆ ತಡೆ ನೀಡಬೇಕು ಎಂದು ಕೋರಿದರಲ್ಲದೆ, ಸ್ವತಃ ಅತಿಶಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರೂ, ನ್ಯಾಯಾಧೀಶರು ಅವರನ್ನು ವಿಶಲ್ ಬ್ಲೋಯರ್ ಆಗಿಸಿದ್ದಾರೆ ಎಂದು ಆರೋಪಿಸಿದರು.
ಆಪ್ ನಾಯಕಿ ಅತಿಶಿ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಆದೇಶದಲ್ಲಿ ಯಾವುದೇ ವಿಕೃತಿ ಅಥವಾ ಕಾನೂನುಬಾಹಿರವಾದದ್ದು ಇರಲಿಲ್ಲ ಎಂದು ದೂರುದಾರರ ಪರ ವಕೀಲರು ವಾದಿಸಿದರು.
2024ರ ಜನವರಿ 27 ಹಾಗೂ ಎಪ್ರಿಲ್ 2ರಂದು ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಪಕ್ಷಾಂತರ ಮಾಡಿದರೆ 20ರಿಂದ 25 ಕೋಟಿ ರೂಪಾಯಿವರೆಗೆ ಲಂಚ ನೀಡಲಾಗುವುದು ಎಂದು ಆಪ್ ಶಾಸಕರಿಗೆ ಬಿಜೆಪಿಯು ಆಮಿಷವೊಡ್ಡಿದೆ ಎಂದು ಅತಿಶಿ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಅರೋಪಿಸಿ ದಿಲ್ಲಿ ಬಿಜೆಪಿ ಘಟಕದ ಮಾಜಿ ಮಾಧ್ಯಮ ಮುಖ್ಯಸ್ಥ ಹಾಗೂ ವಕ್ತಾರ ಪ್ರವೀಣ್ ಶಂಕರ್ ಕಪೂರ್ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.