38 ಜನರಿಗೆ ಮರಣ ದಂಡನೆ ವಿಧಿಸಿದ್ದ ನ್ಯಾಯಾಧೀಶರು ಗುಜರಾತಿನ ಪ್ರಾಸಿಕ್ಯೂಷನ್ ನಿರ್ದೇಶಕರಾಗಿ ನೇಮಕ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 2008ರ ಅಹ್ಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 38 ಜನರಿಗೆ ಮರಣ ದಂಡನೆ ವಿಧಿಸುವ ಮೂಲಕ ಸುದ್ದಿಯಾಗಿದ್ದ ಸೆಷನ್ಸ್ ನ್ಯಾಯಾಧೀಶರು ಈಗ ಗುಜರಾತಿನ ಪ್ರಾಸಿಕ್ಯೂಷನ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅದು ಭಾರತದಲ್ಲಿ ಅತ್ಯಂತ ಹೆಚ್ಚಿನ ಜನರಿಗೆ ಮರಣ ದಂಡನೆ ವಿಧಿಸಿದ್ದ ಪ್ರಕರಣವಾಗಿ ಗಮನ ಸೆಳೆದಿತ್ತು ಎಂದು thewire.in ವರದಿ ಮಾಡಿದೆ.
ಸೆಷನ್ಸ್ ನ್ಯಾಯಾಧೀಶರಾಗಿ ಸುಮಾರು ಒಂದು ವರ್ಷದ ಹಿಂದೆ ನಿವೃತ್ತರಾಗಿದ್ದ ಅಂಬಾಲಾಲ ಆರ್.ಪಟೇಲ್ 2023ರಲ್ಲಿ ಮುಂಬೈನ ಸಾಮಾಜಿಕ ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಅವರು 2002ರ ಗೋಧ್ರಾ ದಂಗೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದ ಆರೋಪದ ವಿಚಾರಣೆಯಿಂದ ತನ್ನನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ತಿರಸ್ಕರಿಸಿದ್ದರು.
ಗುಜರಾತಿನ ಮಾಜಿ ಪೋಲಿಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ವಿಚಾರಣೆಯನ್ನೂ ಇದೇ ನ್ಯಾಯಾಧೀಶರು ನಡೆಸಿದ್ದರು.
ಶ್ರೀಕುಮಾರ, ಭಟ್ ಮತ್ತು ಸೆಟಲ್ವಾಡ್ 2002ರ ಗುಜರಾತ್ ದಂಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ಷಡ್ಯಂತ್ರ ನಡೆಸಿದ್ದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸೆಟಲ್ವಾಡ್ ಮತ್ತು ಶ್ರೀಕುಮಾರ ಅವರಿಗೆ ಗುಜರಾತ್ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದರೆ, ಭಟ್ ಅವರು ಇನ್ನೊಂದು ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಸೇರಿದಂತೆ ಹಲವು ಆರೋಪಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
2008ರ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವವರು ಸಲ್ಲಿಸಿರುವ ಮೇಲ್ಮನವಿಗಳು ಮತ್ತು ಅವರ ಮರಣ ದಂಡನೆಯ ದೃಢೀಕರಣಕ್ಕಾಗಿ ಗುಜರಾತ್ ಸರಕಾರವು ಸಲ್ಲಿಸಿರುವ ಅರ್ಜಿಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿವೆ.
ಪಟೇಲ್ ಪ್ರಕರಣದಲ್ಲಿ ಇತರ 11 ಜನರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದ್ದರು.
ನಿವೃತ್ತ ನ್ಯಾಯಾಧೀಶ ಪಟೇಲ್ ಅವರು ಈಗ ರಾಜ್ಯದ ಪ್ರಾಸಿಕ್ಯೂಷನ್ ನಿರ್ದೇಶಕರಾಗಿ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬಹುದು, ವಿಚಾರಣೆಗಳನ್ನು ತ್ವರಿತಗೊಳಿಸಬಹುದು ಮತ್ತು ಮೇಲ್ಮನವಿಗಳ ಸಲ್ಲಿಕೆಯ ಕುರಿತು ಅಭಿಪ್ರಾಯವನ್ನು ನೀಡಬಹುದು.
ಗುಜರಾತಿನಲ್ಲಿ ಪ್ರಾಸಿಕ್ಯೂಷನ್ ನಿರ್ದೇಶಕರ ಹುದ್ದೆಯು ಕೆಲವು ವರ್ಷಗಳಿಂದ ಸುಪ್ತಾವಸ್ಥೆಯಲ್ಲಿತ್ತು. ಸಿಆರ್ಪಿಸಿಯ ನಿಬಂಧನೆಗಳಂತೆ ‘ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು’ ಪ್ರಾಸಿಕ್ಯೂಷನ್ ನಿರ್ದೇಶನಾಲಯವನ್ನು ಪುನರುಜ್ಜೀವನಗೊಳಿಸಲು ಬಿಜೆಪಿ ಸರಕಾರವು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ರಾಜ್ಯದ ಗೃಹ,ಕಾನೂನು ಮತ್ತು ಶಾಸನ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡಿತ್ತು.
ಫ್ಯಾಕ್ಟರಿಯೊಂದರ ಹೊರಗೆ ಗುಜರಿ ಸಂಗ್ರಹಿಸುತ್ತಿದ್ದ ದಲಿತ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಜನವರಿ 2022ರಲ್ಲಿ ಗುಜರಾತ ಪ್ರಾಸಿಕ್ಯೂಷನ್ ನಿರ್ದೇಶನಾಲಯವನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ಸರಕಾರ ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರು ತಮ್ಮ ಕರ್ತವ್ಯಗಳಲ್ಲಿ ವಿಫಲಗೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಹೇಳಿತ್ತು.