ಸರಕಾರದ ಧೋರಣೆಯಿಂದಾಗಿ ನ್ಯಾಯಾಂಗ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ: ಸುಪ್ರೀಂಕೋರ್ಟ್ ಕಳವಳ
ಹೊಸದಿಲ್ಲಿ: ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳಿಗೆ ಕೊಲಾಜಿಯಂ ಶಿಫಾರಸ್ಸು ಮಾಡಿದ ಪಟ್ಟಿಯನ್ನು ಸರ್ಕಾರ ತಿಂಗಳುಗಳು ಕಳೆದರೂ ಅಂತಿಮಪಡಿಸದೇ ಇರುವ ಕಾರಣದಿಂದ ಬಹಳಷ್ಟು ಮಂದಿ ಸಂಭಾವ್ಯ ಅಭ್ಯರ್ಥಿಗಳು ಬಿಟ್ಟುಹೋಗುತ್ತಿದ್ದು, ನ್ಯಾಯಾಂಗ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
"ತಮ್ಮ ವಕೀಲಿ ವೃತ್ತಿಯನ್ನು ತ್ಯಾಗ ಮಾಡಿ ನ್ಯಾಯಾಂಗ ಸೇರಲು ಬಯಸುವ ಹಲವು ಮಂದಿ ಪ್ರತಿಭಾವಂತ ಕಾನೂನು ತಜ್ಞರು, ಸರ್ಕಾರ ಹೆಸರುಗಳನ್ನು ಬೇರ್ಪಡಿಸುವ ಪ್ರಕ್ರಿಯೆಗೆ ಬಲಿಪಶುಗಳಾಗುತ್ತಿದ್ದಾರೆ. ವಿನಾಕಾರಣ ಒಂದು ಹೆಸರಿನ ಬದಲು ಮತ್ತೊಂದು ಹೆಸರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧೂಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"ಜನ ಬರಲು ನಿರಾಕರಿಸುತ್ತಿದ್ದಾರೆ. ಅತ್ಯುತ್ತಮ ಪ್ರತಿಭೆಗಳನ್ನು ತರಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಪ್ರತ್ಯೇಕಿಸುವ ನೀತಿಯಿಂದಾಗಿ ಒಳ್ಳೆಯ ಪ್ರತಿಭೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅವರು ಅರ್ಧದಲ್ಲೇ ಬಿಟ್ಟು ಹೋಗುತ್ತಿದ್ದಾರೆ, ಹಿಂದೇಟು ಹಾಕುತ್ತಿದ್ದಾರೆ... ಯಾವುದೇ ಹೆಸರನ್ನು ಹೇಳಲು ನಾನು ಬಯಸುವುದಿಲ್ಲ. ಆದರೆ ನಾವು ಒಂದೆರಡು ಒಳ್ಳೆಯ ವ್ಯಕ್ತಿಗಳನ್ನು ನಾವು ಕಳೆದುಕೊಂಡಿದ್ದೇವೆ" ಎಂದು ನ್ಯಾಯಮೂರ್ತಿ ಕೌಲ್, ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ವೆಂಕಟರಮಣಿ ಅವರನ್ನು ಉದ್ದೇಶಿಸಿ ತಿಳಿಸಿದರು.
ಅರ್ಜಿದಾರರಾದ ಬೆಂಗಳೂರು ವಕೀಲರ ಸಂಘದ ಪರವಾಗಿ ಹಾಜರಾದ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಅಮಿತ್ ಪೈ ಅವರು, "ಕೇಂದ್ರ ಸರ್ಕಾರಕ್ಕೆ ಕೊಲಾಜಿಯಂ ನೀಡಿರುವ ಹೆಸರುಗಳ ಪಟ್ಟಿಯಿಂದ ಕೆಲ ಹೆಸರುಗಳನ್ನು ಬೇರ್ಪಡಿಸುವ ಕ್ರಮ ನಿಜಕ್ಕೂ ನಾಚಿಕೆಗೇಡು" ಎಂದು ಬಣ್ಣಿಸಿದರು.