ಭಾರತವು ಸರ್ವಾಧಿಕಾರದತ್ತ ತಿರುಗಲು ನ್ಯಾಯಾಂಗವೇ ಹೊಣೆಯಾಗಿದೆ: ಹಿರಿಯ ವಕೀಲ ದುಷ್ಯಂತ್ ದವೆ
ಹಿರಿಯ ವಕೀಲ ದುಷ್ಯಂತ್ ದವೆ (Photo credit: indialegallive.com)
ಹೊಸದಿಲ್ಲಿ: ಭಾರತವು ನಿರಂಕುಶಾಧಿಕಾರ ಪ್ರಭುತ್ವಕ್ಕೆ ತಿರುಗಲು ನ್ಯಾಯಾಂಗವೇ ಏಕೈಕ ಹೊಣೆಯಾಗಿದೆ ಎಂದು ThePrint ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹಿರಿಯ ವಕೀಲ ದುಷ್ಯಂತ್ ದವೆ ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಶನದಲ್ಲಿ, ವಿರೋಧ ಪಕ್ಷಗಳ ನಾಯಕರನ್ನು ಕಾನೂನಾತ್ಮಕ ಗುರಿಯಾಗಿಸಿಕೊಳ್ಳವುದರಿಂದ ಹಿಡಿದು ನ್ಯಾಯಾಧೀಶರು ನಿವೃತ್ತಿ ನಂತರ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಪೀಠಗಳಿಗೆ ವಹಿಸುತ್ತಿರುವುದರವರೆಗೆ ವ್ಯಾಪಕ ವಿಷಯಗಳ ಬಗ್ಗೆ ದವೆ ಮಾತನಾಡಿದ್ದಾರೆ.
ತನ್ನ ಎಂದಿನ ಧಾಟಿಯಲ್ಲಿ ಮಾತನಾಡಿರುವ ದುಷ್ಯಂತ್ ದವೆ, ಸುಪ್ರೀಂ ಕೋರ್ಟ್ ಹಾಗೂ ದೇಶಾದ್ಯಂತ ಹೈಕೋರ್ಟ್ ಗಳಲ್ಲಿ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳಲ್ಲಿ ನ್ಯಾಯವು ಗೈರಾಗಿತ್ತು ಎಂದು ಟೀಕಿಸಿದ್ದಾರೆ.
“ಟೀಕಾಕಾರರನ್ನು ರಕ್ಷಿಸಲಾಗುತ್ತಿಲ್ಲ, ಸ್ಟ್ಯಾಂಡಪ್ ಕಾಮೆಡಿಯನ್ ಗಳನ್ನು ರಕ್ಷಿಸಲಾಗುತ್ತಿಲ್ಲ, ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ರಕ್ಷಿಸಲಾಗುತ್ತಿಲ್ಲ” ಎಂದು ಪ್ರತಿಪಾದಿಸಿರುವ ಅವರು, “ನಾವಿಂದು ನಿಜವಾಗಿಯೂ ನಮ್ಮನ್ನು ನಿರಂಕುಶಾಧಿಕಾರ ಪ್ರಭುತ್ವವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೇವೆ ಹಾಗೂ ಇದಕ್ಕಾಗಿ ನ್ಯಾಯಾಂಗವೇ ಸಂಪೂರ್ಣವಾಗಿ ಹೊಣೆಯಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ” ಎಂದೂ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿರೀಕ್ಷೆಗಳು ಹಾಗೂ ಸಂವಿಧಾನಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಂಗವನ್ನು ನ್ಯಾಯ ಕೇಂದ್ರಿತ ಸಂಸ್ಥೆಯನ್ನಾಗಿ ರೂಪಾಂತರಿಸಬೇಕು ಎಂದು ನಿರೀಕ್ಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಹೀಗಿದ್ದೂ, “ಅವರಿಗೆ ಹಾರ್ವರ್ಡ್, ಆಕ್ಸ್ ಫರ್ಡ್ ಹಾಗೂ ಇನ್ನಿತರ ಸಂಸ್ಥೆಗಳಿಗೆ ಹೋಗಲು ಮತ್ತು ಉಪನ್ಯಾಸ ನೀಡಲು ಸಮಯವಿದೆಯಾದರೂ, ದೂರದ ನ್ಯಾಯಾಲಯಗಳಿಗೆ ತೆರಳಿ, ಅವುಗಳ ಪರಿಸ್ಥಿತಿಯನ್ನು ನೋಡಲು, ಜನರು ಹೇಗೆ ನ್ಯಾಯ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಅವರ ಬಳಿ ಸಮಯವಿಲ್ಲ" ಎಂದೂ ದವೆ ಟೀಕಿಸಿದ್ದಾರೆ.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗವು ವಿಫಲವಾಗಿರುವುದಕ್ಕೆ ಅವರು ಸುಪ್ರೀಂ ಕೋರ್ಟ್ ಅನ್ನು ದೂಷಿಸಿದ್ದಾರೆ.
“ಚುನಾವಣಾ ಆಯೋಗದ ವೈಫಲ್ಯಕ್ಕೆ ಸುಪ್ರೀಂ ಕೋರ್ಟ್ ಅನ್ನೇ ಸಂಪೂರ್ಣವಾಗಿ ಹೊಣೆಯಾಗಿಸಬೇಕಿದೆ. ಕಾಂಗ್ರೆಸ್ ಆಗಿರಲಿ, ಬಿಜೆಪಿಯಾಗಿರಲಿ, ಎಲ್ಲ ಆಡಳಿತಾರೂಢ ಪಕ್ಷಗಳ ಸರಕಾರಗಳೂ ಯಾವಾಗಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಬಯಸುತ್ತವೆ. ಬಲಿಷ್ಠ ಸಾಂವಿಧಾನಿಕ ಸಂಸ್ಥೆಗಳು ಯಾರಿಗೆ ಬೇಕಿವೆ? ಆದರೆ, ಈ ಕುರಿತು ಕ್ರಮ ಕೈಗೊಳ್ಳಬೇಕಿರುವುದು ನ್ಯಾಯಾಧೀಶರು” ಎಂದು ಅವರು ಹೇಳಿದ್ದಾರೆ.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ವಿಫಲವಾಗಿರುವ ಚುನಾವಣಾ ಆಯೋಗದ ವಿರುದ್ಧ ಜನರು ಏನು ಮಾಡಬಹುದು ಎಂಬ ಪ್ರಶ್ನೆಗೆ ದವೆ ಹೆಚ್ಚೇನೂ ಭರವಸೆ ಹೊಂದಿಲ್ಲ.
“ಭಾರತದ ಪ್ರಜೆಗಳಾದ ನಾವು, ಅದು ಕಾರ್ಯಾಂಗವಾಗಿರಲಿ, ನ್ಯಾಯಾಂಗವಾಗಿರಲಿ ಅಥವಾ ಶಾಸಕಾಂಗವಾಗಿರಲಿ; ಅಧಿಕಾರದ ಮರ್ಜಿಯಡಿ ಬದುಕುತ್ತಿದ್ದೇವೆ. ನಾವು ಅಸಹಾಯಕರಾಗಿದ್ದೇವೆ. ನಾವು ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿರುವ ಅವರು, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123ರ ಸ್ಪಷ್ಟ ಉಲ್ಲಂಘನೆಯತ್ತ ಬೊಟ್ಟು ಮಾಡಿದ್ದಾರೆ.
ಒಂದು ವೇಳೆ ಅಭ್ಯರ್ಥಿಯೊಬ್ಬರು ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ನೆಲೆಯಲ್ಲಿ ಮತ ಯಾಚಿಸಿದರೆ, ಅದು ಭ್ರಷ್ಟ ನಡವಳಿಕೆಯಾಗುತ್ತದೆ ಎಂದು ಈ ಸೆಕ್ಷನ್ ಘೋಷಿಸಿದೆ. ಕಾನೂನಿನಡಿ ಭ್ರಷ್ಟ ನಡವಳಿಕೆಗಳ ನೆಲೆಯಲ್ಲಿ ಅಭ್ಯರ್ಥಿಯೊಬ್ಬರನ್ನು ಅನರ್ಹಗೊಳಿಸಬಹುದಾಗಿದೆ.
ಪ್ರಧಾನಿಗೆ ಘನತೆಗೆ ಶೋಭೆಯಲ್ಲ
ಸಂದರ್ಶನದಲ್ಲಿ ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧ ದುಷ್ಯಂತ್ ದವೆ ವಾಗ್ದಾಳಿ ನಡೆಸಿದ್ದಾರೆ. “ಚುನಾವಣಾ ಆಯೋಗವು ಪ್ರತಿ ದಿನವೂ ತಾನು ವಿಫಲ ಸಂಸ್ಥೆ ಎಂಬುದನ್ನು ದೇಶದೆದುರು ಸಾಬೀತು ಪಡಿಸುತ್ತಿದ್ದು, ಪ್ರಧಾನ ಮಂತ್ರಿಗಳು ಪದೇ ಪದೇ ನೀಡುತ್ತಿರುವ ಹೇಳಿಕೆಗಳನ್ನು ತಡೆಯುವಲ್ಲಿ ವಿಫಲವಾಗಿದೆ” ಎಂದು ಅವರು ಕಿಡಿ ಕಾರಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿಯವರಿಗೆ ನೋಟಿಸ್ ಜಾರಿಗೊಳಿಸಿಲ್ಲ ಎಂಬುದರತ್ತ ಬೊಟ್ಟು ಮಾಡಿರುವ ಅವರು, ತಮ್ಮ ತಾರಾ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ದೂರಿದ್ದಾರೆ.
“ಮೋದಿಗೆ ನೋಟಿಸ್ ಜಾರಿಗೊಳಿಸುವ ಧೈರ್ಯವೂ ಚುನಾವಣಾ ಆಯೋಗಕ್ಕಿಲ್ಲ. ಮೋದಿಯವರ ಹೆಸರು ಉಲ್ಲೇಖಿಸಿದರೆ ಅದು ದೈವನಿಂದೆಯಾಗುತ್ತದೆ ಏನೋ ಎಂಬಷ್ಟರ ಮಟ್ಟಿಗೆ ಅವರ ಹೆಸರನ್ನು ಚುನಾವಣಾ ಆಯೋಗ ಬಳಸುತ್ತಿಲ್ಲ” ಎಂದು ಅವರು ಟೀಕಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ನೀಡಿರುವ ಹಲವಾರು ಹೇಳಿಕೆಗಳನ್ನು ಉಲ್ಲೇಖಿಸಿರುವ ಅವರು, ಚುನಾವಣೆಯ ಸಂದರ್ಭದಲ್ಲಿ ಸೃಷ್ಟಿಸಲಾಗುತ್ತಿರುವ ನಿರೂಪಣೆಯನ್ನು ಎತ್ತಿ ತೋರಿಸಿದ್ದಾರೆ. ಇದಲ್ಲದೆ, ಮೋದಿ, ಪಾಕಿಸ್ತಾನವು ರಾಜಕುಮಾರನನ್ನು ಪ್ರಧಾನಿಯನ್ನಾಗಿಸಲು ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ವಿರುದ್ಧ ನಡೆಸಿದ ವಾಗ್ದಾಳಿ ಹಾಗೂ ಮಂಗಳ ಸೂತ್ರ ಕುರಿತ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ. ಇಂತಹ ಹೇಳಿಕೆಗಳು ಪ್ರಧಾನಿಗಳ ಘನತೆಗೆ ಶೋಭೆಯಲ್ಲ ಎಂದು ಅವರು ವಿಷಾದಿಸಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧ ನಡೆಯುತ್ತಿರುವ ಕಾನೂನಾತ್ಮಕ ದಾಳಿಗಳ ಕುರಿತೂ ಅವರು ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ಆಡಳಿತಾರೂಢವಾಗಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದಾಳಿಗಳು ಕಂಗೆಡಿಸುವಂತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಆಡಳಿತಾರೂಢ ಪಕ್ಷದ ಒಬ್ಬನೇ ಒಬ್ಬ ನಾಯಕ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಆಡಳಿತಾರೂಢ ಪಕ್ಷದ ಒಂದೇ ಒಂದು ಸರಕಾರದ ವಿರುದ್ಧ ತನಿಖೆಯಾಗಿಲ್ಲ” ಎಂದು ಅವರು ಆರೋಪಿಸಿದ್ದಾರೆ.