ಲಾಡೆನ್ ಚಿತ್ರ ಫೋನ್ ನಲ್ಲಿದ್ದ ಮಾತ್ರಕ್ಕೆ ಉಗ್ರ ಸಂಘಟನೆಯ ಸದಸ್ಯ ಎನ್ನಲು ಸಾಧ್ಯವಿಲ್ಲ : ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ವ್ಯಕ್ತಿಯೊಬ್ಬನ ಫೋನ್ ನಲ್ಲಿ ಅಲ್ ಖಾಯಿದ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಉಸಾಮ ಬಿನ್ ಲಾಡೆನ್ ಚಿತ್ರವಿತ್ತು ಎಂಬ ಒಂದೇ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಭಯೋತ್ಪಾದಕ ಸಂಘಟನೆಯೊಂದರ ಸದಸ್ಯ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ ಹಾಗೂ ಆತನಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಜಾಮೀನು ನೀಡಿದೆ.
ಅಮ್ಮರ್ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು 2021 ಆಗಸ್ಟ್ ನಲ್ಲಿ ಬಂಧಿಸಿತ್ತು. ಆತನ ಜಾಮೀನು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ವಿಭಾಗಪೀಠವೊಂದು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಸಿದ್ಧಾಂತದಿಂದ ಆರೋಪಿಯು ಪ್ರಭಾವಿತನಾಗಿದ್ದಾನೆ ಎಂದು ಎನ್ಐಎ ಆರೋಪಿಸಿದೆ. ಖಲೀಫಶಾಹಿ ಸ್ಥಾಪನೆಗಾಗಿ ದಕ್ಷಿಣ-ಮಧ್ಯ ಏಶ್ಯದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣದ ಪ್ರದೇಶಗಳಿಗೆ ವಲಸೆ ಹೋಗಲು ಹಾಗೂ ಬಳಿಕ ಭಾರತದಲ್ಲಿ ಐಸಿಸ್ ಪರವಾಗಿ ಚಟುವಟಿಕೆಗಳನ್ನು ನಡೆಸಲು ಪಿತೂರಿ ರೂಪಿಸಿದ್ದನು ಎಂದು ಅದು ಹೇಳಿತ್ತು.
ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿಸಿದ ವೀಡಿಯೊಗಳು ಮತ್ತು ‘‘ಅಮಾನುಷ ಹತ್ಯೆ’’ಗಳನ್ನು ತೋರಿಸುವ ಇನ್ಸ್ಟಾಗ್ರಾಮ್ ವೀಡಿಯೊಗಳನ್ನು ರಹಿಮಾನ್ ಡೌನ್ಲೋಡ್ ಮಾಡಿದ್ದನು ಎಂದು ಎನ್ಐಎ ಆರೋಪಿಸಿದೆ. ಲಾಡೆನ್ ಮತ್ತು ಇಸ್ಲಾಮಿಕ್ ಸ್ಟೇಟ್ ಧ್ವಜಗಳ ಚಿತ್ರಗಳು ಆರೋಪಿಯ ಮೊಬೈಲ್ ಫೋನ್ ನಲ್ಲಿ ಪತ್ತೆಯಾಗಿವೆ ಎಂದು ಅದು ತಿಳಿಸಿದೆ. ಇದು ಆತನ ಭಯೋತ್ಪಾದಕ ಮಾನಸಿಕತೆ ಮತ್ತು ಆತ ಭಯೋತ್ಪಾದಕ ಗುಂಪಿನೊಂದಿಗೆ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.
‘‘ಆದರೆ, ಆತ ಇಂಥ ಭಯೋತ್ಪಾದಕ ಸಂಘಟನೆಯ ಸದಸ್ಯ ಎಂದು ಹೇಳಲು ಇಷ್ಟೇ ಸಾಕಾಗುವುದಿಲ್ಲ ಮತ್ತು ಇದರ ಆಧಾರದಲ್ಲಿ ಆತ ಆ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲು ಸಾಧ್ಯವೇ ಇಲ್ಲ’’ ಎಂದು ಹೈಕೋರ್ಟ್ ಸೋಮವಾರ ಹೇಳಿತು.