ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಜೋಯ್ಮಲ್ಯ ಬಾಗ್ಚಿ ಪ್ರಮಾಣ ವಚನ
2031ರಲ್ಲಿ ಸುಪ್ರೀಂ ಕೋರ್ಟ್ ಸಿಜೆಐ ಹುದ್ದೆ

Photo credit: livelaw.in
ಹೊಸದಿಲ್ಲಿ: ನ್ಯಾ. ಜೋಯ್ಮಲ್ಯ ಬಾಗ್ಚಿ ಇಂದು (ಸೋಮವಾರ) ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು 2031ರಲ್ಲಿ ನ್ಯಾ. ಕೆ.ವಿ.ವಿಶ್ವನಾಥನ್ ನಂತರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಲಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ನ್ಯಾ. ಜಾಯ್ ಮಲ್ಯ ಬಾಗ್ಚಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಹಲವು ವಕೀಲರು ಉಪಸ್ಥಿತರಿದ್ದರು.
ಮಾರ್ಚ್ 10ರಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ, ಕಲ್ಕತ್ತಾ ಹೈಕೋರ್ಟ್ ನ ನ್ಯಾಯಾಧೀಶರಾದ ನ್ಯಾ. ಬಾಗ್ಚಿ, ತಾವು ನ್ಯಾಯಾಧೀಶರಾಗಿ ಪದಗ್ರಹಣ ಮಾಡಿದಾಗಿನಿಂದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಲಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 6ರಂದು ನಡೆದಿದ್ದ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಭೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಕೊಲಿಜಿಯಂ, ನ್ಯಾ. ಬಾಗ್ಚಿಯವರನ್ನು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಿಸಲು ಸರ್ವಾನುಮತದ ಶಿಫಾರಸು ಮಾಡಿತ್ತು. ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಅಖಿಲ ಭಾರತ ಹೈಕೋರ್ಟ್ ನ್ಯಾಯಾಧೀಶರ ಜ್ಯೇಷ್ಠತಾ ಪಟ್ಟಿಯಲ್ಲಿ ನ್ಯಾ. ಬಾಗ್ಚಿ 11ನೇ ಸರದಿಯಲ್ಲಿದ್ದಾರೆ.
ಇದಕ್ಕೂ ಮುನ್ನ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಅರ್ಹತೆ ಹೊಂದಿರುವ ಮುಖ್ಯೋ ನ್ಯಾಯಾಧೀಶರು ಹಾಗೂ ಹೈಕೋರ್ಟ್ ಗಳ ಹಿರಿಯ ಶ್ರೇಣಿಯ ನ್ಯಾಯಾಧೀಶರ ಹೆಸರುಗಳ ಕುರಿತು ಕೊಲಿಜಿಯಂ ಚರ್ಚೆ ನಡೆಸಿತ್ತು.
“ಜ್ಯೇಷ್ಠತೆಯನ್ನು ಜಾಗರೂಕತೆಯಿಂದ ಪರಿಶೀಲಿಸಿದ ನಂತರ, ಸಮಗ್ರತೆ ಹಾಗೂ ಅರ್ಹತೆಯನ್ನೂ ಕೂಡಾ ಪರಿಗಣನೆಯ ಪ್ರಮುಖ ಅಂಶವನ್ನಾಗಿ ಪರಿಗಣಿಸಲಾಗಿದ್ದು, ಕಲ್ಕತ್ತಾ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಾಗಿರುವ ನ್ಯಾ. ಬಾಗ್ಚಿಯನ್ನು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ” ಎಂದು ಕೊಲಿಜಿಯಂ ತನ್ನ ಪ್ರಕಟಣೆಯಲ್ಲಿ ಹೇಳಿತ್ತು.
ಈ ನೇಮಕಾತಿಯೊಂದಿಗೆ, ನ್ಯಾ. ಬಾಗ್ಚಿ ಅವರು ಮೇ 26, 2031ರಿಂದ ಅಕ್ಟೋಬರ್ 2, 2031ರವರೆಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದಕ್ಕೂ ಮುನ್ನ, ಅವರು ಆರು ವರ್ಷಗಳಿಗಿಂತ ಹೆಚ್ಚು ಕಾಲ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿರಲಿದ್ದಾರೆ.
ನ್ಯಾ. ಬಾಗ್ಚಿಯ ಸೇರ್ಪಡೆಯೊಂದಿಗೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠದ ನ್ಯಾಯಾಧೀಶರ ಒಟ್ಟು ಸಾಮರ್ಥ್ಯ 33ಕ್ಕೆ ಏರಿಕೆಯಾದಂತಾಗಿದೆ.