2020ರ ದಿಲ್ಲಿ ಗಲಭೆ ಕುರಿತ ತೀರ್ಪು ಬಗ್ಗೆ ಕೇಂದ್ರ ಸರ್ಕಾರ ಏಕೆ ಅಸಮಾಧಾನಗೊಂಡಿತ್ತು ಎಂಬುದು ನನಗೆ ತಿಳಿಯದು: ನ್ಯಾ. ಮುರಳೀಧರನ್
ನ್ಯಾ. ಎಸ್. ಮುರಳೀಧರನ್ (PTI)
ಹೊಸದಿಲ್ಲಿ: 2020ರ ದಿಲ್ಲಿ ಗಲಭೆ ಕುರಿತು ನಾನು ನೀಡಿದ ತೀರ್ಪಿನ ಕುರಿತು ಕೇಂದ್ರ ಸರ್ಕಾರವೇಕೆ ಅಸಮಾಧಾನಗೊಂಡಿತ್ತು ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದು ಶನಿವಾರ ಮಾಜಿ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಮುರಳೀಧರನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು Live Law ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 26, 2020ರಂದು ದಿಲ್ಲಿಯಲ್ಲಿ ಆ ತಿಂಗಳ ಆರಂಭದಲ್ಲಿ ನಡೆದಿದ್ದ ಕೋಮು ಗಲಭೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದ ರೀತಿಯ ಕುರಿತು ನ್ಯಾ. ಮುರಳೀಧರನ್ ಅವರನ್ನು ಒಳಗೊಂಡಿದ್ದ ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿತ್ತು.
ಆ ತಿಂಗಳು CAA ಅನ್ನು ವಿರೋಧಿಸುತ್ತಿದ್ದವರು ಹಾಗೂ ಅದರ ಪರ ಇದ್ದವರ ನಡುವೆ ಗಲಭೆ ಸ್ಫೋಟಗೊಂಡಿತ್ತು. ಈ ಗಲಭೆಯಲ್ಲಿ ಕನಿಷ್ಠ ಪಕ್ಷ 53 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಆ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಬಹುತೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.
ಆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಮುರಳೀಧರನ್, 24 ಗಂಟೆಯ ಒಳಗೆ ದ್ವೇಷ ಭಾಷಣ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದನ್ನು ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಮೋದಿ ಸರ್ಕಾರವು ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ವರ್ಗಾಯಿಸಿತ್ತು. ನೂತನ ಹೈಕೋರ್ಟ್ ನ್ಯಾಯಪೀಠವು ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡುವ ಮೂಲಕ ದ್ವೇಷ ಭಾಷಣದ ಕುರಿತಂತೆ ಪೊಲೀಸರು ಹಾಗೂ ಬಿಜೆಪಿ ನಾಯಕರಿಬ್ಬರೂ ತಮ್ಮ ಕಾರ್ಯವೈಖರಿಯ ಪರಿಶೀಲನೆಯಿಂದ ನುಣುಚಿಕೊಳ್ಳಲು ಅವಕಾಶ ನೀಡಿತ್ತು. ಅಲ್ಲದೆ, ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಲಿಲ್ಲ.
ಬೆಂಗಳೂರಿನಲ್ಲಿ The South First ಅಂತರ್ಜಾಲ ತಾಣದ ವತಿಯಿಂದ ಆಯೋಜನೆಯಾಗಿದ್ದ ಸಮ್ಮೇಳನದಲ್ಲಿ ಭಾಗವಹಿಸಿ ಈ ವಿಷಯವನ್ನು ಪ್ರಸ್ತಾಪಿಸಿದ ನ್ಯಾ. ಮುರಳೀಧರನ್, “ಅವರಿಗೇನು ಅಸಮಾಧಾನ ಉಂಟಾಯಿತು ಎಂಬ ಕುರಿತು ನನಗೆ ತಿಳಿದಿಲ್ಲ. ಬೇರೆ ಯಾರೇ ನ್ಯಾಯಾಧೀಶರಾಗಿದ್ದರೂ ಅದನ್ನೇ ಮಾಡಿರುತ್ತಿದ್ದರು” ಎಂದು ಹೇಳಿದ್ದಾರೆ.
“ದಿಲ್ಲಿ ಹೈಕೋರ್ಟ್ ನಲ್ಲಿದ್ದ ನನ್ನ ಯಾರೇ ಸಹೋದ್ಯೋಗಿ ನ್ಯಾಯಾಧೀಶರೂ ಕೂಡಾ ನನ್ನಂತೆಯೇ ಪ್ರತಿಕ್ರಿಯಿಸಿರುತ್ತಿದ್ದರು. ನನಗನ್ನಿಸುವಂತೆ ಯಾರೂ ಅದಕ್ಕಿಂತ ಭಿನ್ನವಾಗಿ ವರ್ತಿಸುತ್ತಿರಲಿಲ್ಲ. ಹೀಗಾಗಿ, ನನಗೂ ಕೂಡಾ ನಿಮ್ಮಂತೆಯೇ ಸರ್ಕಾರಕ್ಕೆ ಯಾವ ವಿಚಾರದಲ್ಲಿ ಅಸಮಾಧಾನ ಉಂಟಾಯಿತು ಎಂಬ ಬಗ್ಗೆ ಸುಳಿವಿಲ್ಲ. ಅದು ಅಂಥ ಸಮಸ್ಯೆಯಲ್ಲ. ಯಾಕೆಂದರೆ, ಹಲವಾರು ಮಂದಿ ಆ ಕ್ರಮ ಸರಿಯಾಗಿತ್ತು ಎಂದೇ ಭಾವಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಫೆಬ್ರವರಿ 26ರ ಮಧ್ಯರಾತ್ರಿ ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತರನ್ನು ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆಗಳಿಗೆ ವರ್ಗಾಯಿಸಲು ನ್ಯಾ. ಮುರಳೀಧರನ್ ತಮ್ಮ ನಿವಾಸದಲ್ಲಿ ತುರ್ತು ವಿಚಾರಣೆ ಕೂಡಾ ನಡೆಸಿದ್ದರು.