ನನ್ನ ಹೇಳಿಕೆಗಳಿಗೆ ಬದ್ಧ, ನ್ಯಾಯಾಂಗ ನಡಾವಳಿ ಉಲ್ಲಂಘಿಸಿಲ್ಲ: ಹೈಕೋರ್ಟ್ ಸಿಜೆಗೆ ಬರೆದ ಪತ್ರದಲ್ಲಿ ನ್ಯಾ.ಎಸ್.ಕೆ. ಯಾದವ್
ಭಾರತವು ಬಹುಸಂಖ್ಯಾತ ಜನರ ಇಚ್ಛೆಯಂತೆ ನಡೆಯುತ್ತದೆ ಎಂದಿದ್ದ ಹೈಕೋರ್ಟ್ ನ್ಯಾಯಮೂರ್ತಿ

ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ (Photo credit : thehindu.com)
ಪ್ರಯಾಗರಾಜ್: ತಾನು ತನ್ನ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ ಮತ್ತು ತಾನು ನ್ಯಾಯಾಂಗ ನಡಾವಳಿಯ ಯಾವುದೇ ತತ್ವವನ್ನು ಉಲ್ಲಂಘಿಸಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರು ಮುಖ್ಯ ನ್ಯಾಯಾಧೀಶ(ಸಿಜೆ)ರಿಗೆ ಬರೆದಿರುವ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಪ್ರಯಾಗರಾಜ್ನಲ್ಲಿ ವಿಶ್ವ ಹಿಂದು ಪರಿಷತ್ನ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ನ್ಯಾ. ಯಾದವ್ ಅವರು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ಸಂಜೀವ ಖನ್ನಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಸೂಚನೆಯಂತೆ ಡಿಸೆಂಬರ್ 17ರಂದು ಅದರ ಮುಂದೆ ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಸಿಜೆ ಅರುಣ ಭನ್ಸಾಲಿಯವರು ನ್ಯಾ. ಯಾದವರಿಂದ ಉತ್ತರವನ್ನು ಕೋರಿದ್ದರು. ಈ ತಿಂಗಳ ಆರಂಭದಲ್ಲಿ ಸಿಜೆಐ ಈ ವಿಷಯದಲ್ಲಿ ಹೊಸ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ನ್ಯಾ.ಭನ್ಸಾಲಿಯವರಿಗೆ ಪತ್ರವನ್ನು ಬರೆದಿದ್ದರು.
ನ್ಯಾ. ಯಾದವ್ ಅವರ ಭಾಷಣದ ವಿರುದ್ಧ ಕಾನೂನು ವಿದ್ಯಾರ್ಥಿಯೋರ್ವರು ಮತ್ತು ಸರಕಾರಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಗೊಳಿಸಲಾಗಿರುವ ಐಪಿಎಸ್ ಅಧಿಕಾರಿಯೋರ್ವರು ಸಲ್ಲಿಸಿದ್ದ ದೂರುಗಳನ್ನು ಈ ಪತ್ರವು ಪ್ರಸ್ತಾವಿಸಿತ್ತೆನ್ನಲಾಗಿದೆ.
ಬಲ್ಲ ಮೂಲಗಳ ಪ್ರಕಾರ ನ್ಯಾ.ಯಾದವ್ ಅವರು ತನ್ನ ಉತ್ತರದಲ್ಲಿ, ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವವರು ತನ್ನ ಭಾಷಣವನ್ನು ತಿರುಚಿದ್ದಾರೆ ಮತ್ತು ಸಾರ್ವಜನಿಕವಾಗಿ ತಮ್ಮನ್ನು ರಕ್ಷಿಸಿಕೊಳ್ಳುವುದು ಕಠಿಣವಾಗಿರುವ ನ್ಯಾಯಾಂಗದ ಸದಸ್ಯರನ್ನು ನ್ಯಾಯಾಂಗದ ಹಿರಿಯರು ರಕ್ಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ತನ್ನ ಹೇಳಿಕೆಗಳಿಗಾಗಿ ನ್ಯಾ.ಯಾದವ ಕ್ಷಮೆ ಯಾಚಿಸಿಲ್ಲ, ತನ್ನ ಭಾಷಣವು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಮೌಲ್ಯಗಳಿಗೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳ ಅಭಿವ್ಯಕ್ತಿಯಾಗಿತ್ತು ಮತ್ತು ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನುಂಟು ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.
ಡಿ.8ರಂದು ವಿಹಿಂಪ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡಿದ ಸಂದರ್ಭದಲ್ಲಿ ನ್ಯಾ.ಯಾದವ ಅವರು ಮುಸ್ಲಿಮ್ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು.
ನ್ಯಾ.ಯಾದವರ ಉತ್ತರವನ್ನು ಕೋರಿದ್ದ ಪತ್ರವು ಗೋಸಂರಕ್ಷಣೆಗೆ ಸಂಬಂಧಿಸಿದಂತೆ ಅವರ ಆದೇಶವೊಂದನ್ನು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಎತ್ತಿದ್ದ ಪ್ರಶ್ನೆಗಳನ್ನೂ ಉಲ್ಲೇಖಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾ.ಯಾದವ್, ಗೋರಕ್ಷಣೆಯು ಸಮಾಜವೊಂದರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಾನೂನಿನಡಿ ಅದರ ಮಹತ್ವವನ್ನು ಸರಿಯಾಗಿ ಗುರುತಿಸಲಾಗಿದೆ. ಗೋರಕ್ಷಣೆಯ ಪರವಾಗಿ ನ್ಯಾಯಸಮ್ಮತವಾದ ಭಾವನೆಯನ್ನು ಬೆಂಬಲಿಸುವುದು ನ್ಯಾಯ, ಸಮಗ್ರತೆ ಮತ್ತು ನಿಷ್ಪಕ್ಷತನದ ನೀತಿಗಳ ಉಲ್ಲಂಘನೆ ಎಂದು ಅರ್ಥೈಸಬಾರದು ಎಂದು ಒತ್ತಿ ಹೇಳಿದ್ದಾರೆನ್ನಲಾಗಿದೆ.