ಕಲ್ಲಿಕೋಟೆ ವಿ.ವಿ. ಸೆನೆಟ್ ಸಭೆ : ಸಂಘ ಪರಿವಾರ ಸಂಬಂಧ ಹೊಂದಿದ ಸದಸ್ಯರಿಗೆ ಎಸ್ಎಫ್ಐ ತಡೆ
Photo: Arif Mohammed Khan (SFI Instagram)
ಮಲಪ್ಪುರಂ: ಕೇರಳದ ರಾಜ್ಯಪಾಲ ಹಾಗೂ ಕುಲಾಧಿಪತಿ ಆರಿಫ್ ಮುಹಮ್ಮದ್ ಖಾನ್ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸೆನೆಟ್ ಗೆ ನಾಮನಿರ್ದೇಶನ ಮಾಡಿದ ಐವರು ಸದಸ್ಯರ ವಿರುದ್ಧ ಎಸ್ಎಫ್ಐ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಈ ಐವರು ಸದಸ್ಯರು ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘‘ನಮಗೆ ಕುಲಪತಿ ಬೇಕು, ಸಾರ್ವಕರ್ ಅಲ್ಲ’’ ಎಂಬ ಬ್ಯಾನರ್ ಹಿಡಿದುಕೊಂಡು ಅವರು ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರಿಫ್ ಮುಹಮ್ಮದ್ ಖಾನ್ ನಾಮ ನಿರ್ದೇಶನ ಮಾಡಿದ ಸದಸ್ಯರು ಗುರುವಾರ ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ನೂತನ ಸೆನೆಟ್ ನ ಮೊದಲ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಸಭೆಗೆ ಕೆಲವು ನಿಮಿಷಗಳಿಗೆ ಮುನ್ನ ಎಸ್ಎಫ್ಐ ಕಾರ್ಯಕರ್ತರು ಐವರು ಸದಸ್ಯರಿಗೆ ಸೆನೆಟ್ ಸದನದ ಪ್ರವೇಶ ದ್ವಾರದಲ್ಲಿ ತಡೆ ಒಡ್ಡಿದರು. ಅನಂತರ ಸೆನೆಟ್ ಸದನದ ಮುಂದೆ ದರಣಿ ನಡೆಸಿದರು.
ಸೆನೆಟ್ ಸಭೆ ನಡೆಯುವ ಸಭಾಂಗಣಕ್ಕೆ ಸಂಘಪರಿವಾರಕ್ಕೆ ಸೇರಿದ ನಾಮ ನಿರ್ದೇಶಿತರನ್ನು ಎಂದಿಗೂ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಸ್ಎಫ್ಐ ಹೇಳಿದೆ. ಅಲ್ಲದೆ, ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪ್ರತಿಪಾದಿಸಿದೆ.
‘‘ಸೆನೆಟ್ ಸಭೆಯಲ್ಲಿ ಪಾಲ್ಗೊಳ್ಳಲು ಸಂಘ ಪರಿವಾರದ ಬೆಂಬಲಿಗರಿಗೆ ನಾವು ಅವಕಾಶ ನೀಡುವುದಿಲ್ಲ. ಕೇರಳ ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಸಂಘಟಿತವಾಗಿ ನಿಂತಿದೆ. ಆದರೆ, ಕುಲಾಧಿಪತಿಗಳು ವಿಶ್ವವಿದ್ಯಾನಿಲಯಗಳ ಸೆನೆಟ್ ಹಾಗೂ ಸಿಂಡಿಕೇಟ್ ಗೆ ಸಂಘ ಪರಿವಾರದ ಬೆಂಬಲಿಗರನ್ನು ನೇಮಕ ಮಾಡುತ್ತಿದ್ದಾರೆ. ಇಂತಹ ಯಾವುದೇ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಲಾಗುವುದು’’ ಎಂದು ಎಸ್ಎಫ್ಐ ನಾಯಕ ಅಫ್ಝಲ್ ಅಲಿ ತಿಳಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಹಾಗೂ ಎಸ್ಎಫ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ನಡುವೆ ಸೆನೆಟ್ ಸಭೆ ವಿದ್ಯಾರ್ಥಿಗಳ ಪದವಿಗಳನ್ನು ಅನುಮೋದಿಸಲು ಮುಂದಾಗಿದೆ.
ಈ ಹಿಂದೆ ರಾಜ್ಯಪಾಲರು ಶನಿವಾರದಿಂದ ಸೋಮವಾರದ ವರೆಗೆ ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ತಂಗಿದ್ದ ಸಂದರ್ಭ ಎಸ್ಎಫ್ಐ ಕಾರ್ಯಕರ್ತರು ಅವರ ಪ್ರತಿಭಟನೆ ನಡೆಸಿದ್ದರು.
ರಾಜ್ಯ ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣಗೊಳಿಸಲು ಖಾನ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸೆನೆಟ್ ಹಾಗೂ ಸಿಂಡಿಕೇಟ್ ಗಳಿಗೆ ಸಂಘ ಪರಿವಾರಕ್ಕೆ ಸಂಬಂಧಿಸಿ ವ್ಯಕ್ತಿಗಳನ್ನು ನಿಯೋಜಿಸುವ ಮೂಲಕ ಅವರು ಸಂಘ ಸಂಘ ಪರಿವಾರದ ಪರವಾಗಿದ್ದಾರೆ ಎಂದು ಹೇಳಿದ್ದರು.