ಅವರು ‘ಹಿಂದಿಯಾ’ವನ್ನು ಪ್ರಚಾರ ಮಾಡುತ್ತಿದ್ದಾರೆ: ಕಮಲ್ ಹಾಸನ್ ಟೀಕೆ

ಕಮಲ್ ಹಾಸನ್ | PC : ANI
ಚೆನ್ನೈ: ಕೇಂದ್ರ ಸರಕಾರದ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಸ್ತಾವವನ್ನು ಬುಧವಾರ ಬಲವಾಗಿ ಟೀಕಿಸಿದ ಮಕ್ಕಳ್ ನೀದಿ ಮೈಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್, ಇದರಿಂದ ಭಾರತದ ಒಕ್ಕೂಟ ವ್ಯವಸ್ಥೆ ಹಾಗೂ ವೈವಿಧ್ಯತೆ ದುರ್ಬಲಗೊಳ್ಳಲಿದೆ ಎಂದು ಎಚ್ಚರಿಸಿದರು.
ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏಕರೂಪದ ʼಹಿಂದಿಯಾʼವನ್ನು ಪ್ರಚಾರ ಮಾಡುವ ಈ ನಡೆಯಿಂದ ಭಾರತದ ಸರ್ವರನ್ನೂ ಒಳಗೊಳ್ಳುವ ದೃಷ್ಟಿಕೋನಕ್ಕೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವಿಷಯವು ಕೇವಲ ತಮಿಳುನಾಡಿನ ಸಮಸ್ಯೆ ಮಾತ್ರವಲ್ಲ. ಬದಲಿಗೆ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಈಶಾನ್ಯ ರಾಜ್ಯಗಳ ಮೇಲೂ ದುಷ್ಪರಿಣಾಮವುಂಟಾಗಲಿದೆ ಎಂದು ಅವರು ಹೇಳಿದರು.
ಸರ್ವಪಕ್ಷ ಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಧನ್ಯವಾದ ಸಲ್ಲಿಸಿದ ಕಮಲ್ ಹಾಸನ್, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ರಾಜಕೀಯ ಪಕ್ಷಗಳನ್ನು ಅಭಿನಂದಿಸಿದರು.