ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ಪ್ರಾರ್ಥನೆ
ಕಮಲಾ ಹ್ಯಾರಿಸ್ | PC : ANI
ಚೆನ್ನೈ: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ಪ್ರಾರಂಭಗೊಂಡಿದ್ದು, ಅಧ್ಯಕ್ಷೀಯ ಹುದ್ದೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಗೆಲುವಿಗಾಗಿ ಅವರ ತವರಾದ ತಮಿಳುನಾಡಿನ ತುಳುಸೇಂದ್ರಪುರಂನ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಮಲಾ ಹ್ಯಾರಿಸ್ ಅವರ ತಾಯಿಯ ತಂದೆಯಾದ ಜಿ.ವಿ.ಗೋಪಾಲನ್ ಒಂದು ಶತಮಾನದ ಹಿಂದೆ ತಮಿಳುನಾಡಿನ ತುಳುಸೇಂದ್ರಪುರಂನಲ್ಲಿ ಜನಿಸಿದ್ದರು.
ದೇವಾಲಯದೊಳಗೆ ಸ್ಥಾಪಿಸಲಾಗಿರುವ ಕಲ್ಲಿನ ಮೇಲೆ ಸಾರ್ವಜನಿಕ ದೇಣಿಗೆ ನೀಡಿರುವವರ ಪಟ್ಟಿಯಲ್ಲಿ ಕಮಲಾ ಹ್ಯಾರಿಸ್ ಹಾಗೂ ಅವರ ತಾತನ ಹೆಸರನ್ನು ಕೆತ್ತಲಾಗಿದೆ. ದೇವಾಲಯದ ಹೊರಗೆ, “ನಮ್ಮ ನೆಲದ ಮಗಳಿಗೆ ಯಶಸ್ಸು ದೊರೆಯಲಿ” ಎಂದು ಹಾರೈಸುವ ಬ್ಯಾನರ್ ಅನ್ನು ಹಾಕಲಾಗಿದೆ.
ತುಳುಸೇಂದ್ರಪುರಂನಿಂದ ಕೆಲವು ನೂರು ಕಿಲೋಮೀಟರ್ ದೂರ ಇರುವ ತಮಿಳುನಾಡು ರಾಜಧಾನಿ ಚೆನ್ನೈಗೆ ಗೋಪಾಲನ್ ಹಾಗೂ ಅವರ ಕುಟುಂಬವು ವಲಸೆ ಹೋಗಿತ್ತು. ಅಲ್ಲಿ ಗೋಪಾಲನ್ ತಮ್ಮ ನಿವೃತ್ತಿಯವರೆಗೂ ಸರಕಾರಿ ನೌಕರರಾಗಿ ಕಾರ್ಯನಿರ್ವಹಿಸಿದ್ದರು.
ನಂತರ, ಅವರು ಭಾರತ ಸರಕಾರದ ರಾಜತಾಂತ್ರಿಕರಾಗಿ ಝಾಂಬಿಯಾಗೆ ತಮ್ಮ ವಾಸ್ತವ್ಯ ಬದಲಿಸಿದ್ದರು. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಅಲ್ಲೇ ಬೆಳೆದಿದ್ದರು ಹಾಗೂ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದರು.
2020ರಲ್ಲಿ ನಡೆದಿದ್ದ ಅಮೆರಿಕ ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಕಮಲಾ ಹ್ಯಾರಿಸ್ ಗೆಲುವಿಗೆ ಪ್ರಾರ್ಥಿಸುವ ಮೂಲಕ ತುಳುಸೇಂದ್ರಪುರಂ ಜಾಗತಿಕ ಗಮನ ಸೆಳೆದಿತ್ತು. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿಯನ್ನು ಹಂಚಿ ತುಳುಸೇಂದ್ರಪುರಂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು.