ಕಂಗನಾ ರಣಾವತ್ ಅವರ ಕೃಷಿ ಕಾನೂನು ಹೇಳಿಕೆಗಳು ಅಧಾರ ರಹಿತ : ಬಿಜೆಪಿ ನಾಯಕ ಜೈವೀರ್ ಶೆರ್ಗಿಲ್
ಜೈವೀರ್ ಶೆರ್ಗಿಲ್ , ಕಂಗನಾ ರಣಾವತ್ | PC : NDTV
ಹೊಸದಿಲ್ಲಿ : ಮಂಡಿ ಸಂಸದೆ ಕಂಗನಾ ರಣಾವತ್ ಅವರು ಮೂರು ಕೃಷಿ ಕಾನೂನುಗಳನ್ನು ಮರುಸ್ಥಾಪಿಸಲು ಕೋರಿರುವ ಹೇಳಿಕೆ "ಆಧಾರರಹಿತ ಮತ್ತು ತರ್ಕಬದ್ಧವಲ್ಲ" ಎಂದುಬಿಜೆಪಿ ವಕ್ತಾರ ಜೈವೀರ್ ಶೆರ್ಗಿಲ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಶೆರ್ಗಿಲ್, ಕಂಗನಾ ಅವರು ಸಿಖ್ ಸಮುದಾಯದ ವಿರುದ್ಧ ನಿರಂತರ ವಾಗ್ದಾಳಿ, ಅನುಪಯುಕ್ತ, ಆಧಾರರಹಿತ ಮತ್ತು ತರ್ಕಬದ್ಧವಲ್ಲದ ಹೇಳಿಕೆಗಳಿಂದ ಪಂಜಾಬ್ನ ರೈತರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪಂಜಾಬ್ನ ರೈತರೊಂದಿಗೆ ಪ್ರಧಾನಿ ಮೋದಿ ಹಂಚಿಕೊಂಡಿರುವ ಬಾಂಧವ್ಯವು ಮುರಿಯಲಾಗದು. ಕಂಗನಾ ರಣಾವತ್ ಅವರ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಅದನ್ನು ತೀರ್ಮಾನಿಸಬಾರದು ಎಂದು ಶೆರ್ಗಿಲ್ ಹೇಳಿದರು.
ರೈತರ ಪ್ರತಿಭಟನೆಯ ನಂತರ ರದ್ದುಪಡಿಸಲಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರವು ಮರಳಿ ತರಬೇಕು ಎಂದು ಹೇಳುವ ಮೂಲಕ ಕಂಗನಾ ಮಂಗಳವಾರ ವಿವಾದವನ್ನು ಹುಟ್ಟುಹಾಕಿದರು.
ಬಿಜೆಪಿ ಕಂಗನಾ ಹೇಳಿಕೆಗಳಿಂದ ದೂರ ಉಳಿದಿದ್ದು, ಪಕ್ಷದ ಪರವಾಗಿ ಈ ವಿಷಯದ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ಹೇಳಿದೆ.
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಕೃಷಿ ಕಾನೂನುಗಳ ಬಗ್ಗೆ ಕಂಗನಾ ಅವರ ಹೇಳಿಕೆ "ವೈಯಕ್ತಿಕ ಹೇಳಿಕೆ" ಎಂದು ಮಂಗಳವಾರ ಹೇಳಿದ್ದಾರೆ.
"ಬಿಜೆಪಿ ಪರವಾಗಿ ಇಂತಹ ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಅಧಿಕಾರವಿಲ್ಲ. ಇದು ಕೃಷಿ ಮಸೂದೆಗಳ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಿಂಬಿಸುವುದಿಲ್ಲ. ನಾವು ಈ ಹೇಳಿಕೆಯನ್ನು ಖಂಡಿಸುತ್ತೇವೆ" ಎಂದು ಅವರು ಹೇಳಿದರು.
ಕಂಗನಾ ರಣಾವತ್ ಮಂಗಳವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ, "ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರು.
ಗಮನಾರ್ಹವೆಂದರೆ ಕಂಗನಾ ರಣಾವತ್ ಹೇಳಿಕೆಯಿಂದ ಬಿಜೆಪಿ ದೂರ ಸರಿಯುತ್ತಿರುವುದು ಇದು ಎರಡನೇ ಬಾರಿ.
ಕಳೆದ ತಿಂಗಳು, ಕಂಗನಾ ರನೌತ್ ಅವರು ರೈತರ ಪ್ರತಿಭಟನೆಗಳು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.