ಪಂಜಾಬ್ ನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳದ ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’

PC : PTI
ಚಂಡಿಗಢ : ವಿವಿಧ ಸಿಕ್ಖ್ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಲನಚಿತ್ರ ಪಂಜಾಬ್ನ ಚಿತ್ರಮಂದಿರಗಳಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿಲ್ಲ.
ಕಂಗನಾ ರಣಾವತ್ ಅವರು ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಸಮುದಾಯವನ್ನು ಚಿತ್ರಿಸಿರುವ ರೀತಿಯ ಬಗ್ಗೆ ಸಿಕ್ಖ್ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ಬಳಿಕ ಸಿಬಿಎಫ್ಸಿ ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಿತ್ತು.
ಈ ಚಿತ್ರವನ್ನು ಪಂಜಾಬ್ನಲ್ಲಿ ಪ್ರದರ್ಶಿಸುವುದಕ್ಕೆ ನಿಷೇಧ ವಿಧಿಸುವಂತೆ ಎಸ್ಜಿಪಿಸಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗುರುವಾರ ಆಗ್ರಹಿಸಿತ್ತು. ಚಿತ್ರವು ಇತಿಹಾಸವನ್ನು ವಿರೂಪಗೊಳಿಸುವ ಹಾಗೂ ಸಿಕ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶವನ್ನು ಹೊಂದಿದೆ. ಈ ಚಿತ್ರವನ್ನು ಬಿಡುಗಡೆ ಮಾಡಿದರೆ, ಇದು ಸಿಕ್ಖ್ ಸಮುದಾಯದಲ್ಲಿ ಆಕ್ರೋಶವನ್ನು ಪ್ರಚೋದಿಸಬಹುದು ಎಂದು ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದರು.