ಕಾಮಿಡಿಯನ್ ಗೆ ಕಪಾಳಮೋಕ್ಷ ಮಾಡಿದ್ದ ನಟ ವಿಲ್ ಸ್ಮಿತ್ ಕೃತ್ಯವನ್ನು ಸಮರ್ಥಿಸಿದ್ದ ಕಂಗನಾ ರಣಾವತ್ ರ ಹಳೆಯ ಪೋಸ್ಟ್ ವೈರಲ್
CISF ಸಿಬ್ಬಂದಿಯಿಂದ ಸಂಸದೆಗೆ ಕಪಾಳಮೋಕ್ಷ ಪ್ರಕರಣ
ಕಂಗನಾ ರಣಾವತ್ | PC : freepressjournal.in
ಹೊಸದಿಲ್ಲಿ: ಸಂಸದೆಯಾಗಿ ಚುನಾಯಿತರಾಗಿರುವ ಬಿಜೆಪಿಯ ಕಂಗನಾ ರಣಾವತ್ ಅವರಿಗೆ ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕುಲ್ವಿಂದರ್ ಕೌರ್ ಎಂಬ ಸಿಐಎಸ್ಎುಫ್ ಮಹಿಳಾ ಪೇದೆಯು ಕಪಾಳ ಮೋಕ್ಷ ಮಾಡಿರುವ ಘಟನೆಯ ಕುರಿತು ವಾದ ವಿವಾದಗಳು ಭುಗಿಲೆದ್ದಿರುವ ಹೊತ್ತಿನಲ್ಲೇ, 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ ರಾಕ್ ಅವರಿಗೆ ವಿಲ್ ಸ್ಮಿತ್ ಕಪಾಳಮೋಕ್ಷ ಮಾಡಿದ್ದ ಘಟನೆಯನ್ನು ಸಮರ್ಥಿಸಿದ್ದ ಕಂಗನಾ ರಣಾವತ್ ಅವರ ಹಳೆಯ ಪೋಸ್ಟ್ ವೈರಲ್ ಆಗಿದೆ.
ಆ ಪೋಸ್ಟ್ ನಲ್ಲಿ, “ಯಾರಾದರೂ ಮೂರ್ಖ ನನ್ನ ತಾಯಿ ಅಥವಾ ಸಹೋದರಿಯ ಅಸ್ವಸ್ಥತೆಯನ್ನು ಮುಠ್ಠಾಳರ ಗುಂಪೊಂದು ನಗುವಂತೆ ಮಾಡಲು ಬಳಸಿಕೊಂಡಿದ್ದರೆ, ನಾನೂ ಕೂಡಾ ವಿಲ್ ಸ್ಮಿತ್ ರಂತೆಯೆ ಕಪಾಳ ಮೋಕ್ಷ ಮಾಡಿರುತ್ತಿದ್ದೆ” ಎಂದು ಕಂಗನಾ ಬರೆದುಕೊಂಡಿದ್ದರು.
2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಮಿಡಿಯನ್ ಕ್ರಿಸ್ ರಾಕ್, ವಿಲ್ ಸ್ಮಿತ್ ಅವರ ಪತ್ನಿಯ ಬೋಳು ತಲೆಯನ್ನು ಹಾಸ್ಯ ಮಾಡಿದ್ದರು. ಆಗ ವೇದಿಕೆಯ ಮೇಲೇರಿ ಹೋಗಿದ್ದ ವಿಲ್ ಸ್ಮಿತ್, ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ ಮಾಡಿದ್ದರು.
ಈ ನಡುವೆ, ಕಂಗನಾ ರಣಾವತ್ ಗೆ ಕಪಾಳ ಮೋಕ್ಷ ಮಾಡಿದ್ದ ಸಿಐಎಸ್ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ.