ಕೋಚಿಂಗ್ ಸಂಸ್ಥೆಗಳನ್ನು ಸರಕಾರ ನಿಯಂತ್ರಿಸಬೇಕು: ಕನ್ಹಯ್ಯ ಕುಮಾರ್

ಕನ್ಹಯ್ಯ ಕುಮಾರ್ |PC : PTI
ಹೊಸದಿಲ್ಲಿ: ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಇರುವ ಕೋಚಿಂಗ್ ಸಂಸ್ಥೆಗಳನ್ನು ಸರಕಾರ ನಿಯಂತ್ರಿಸಬೇಕು ಎಂದು ಶನಿವಾರ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಸಂಸ್ಥೆಗಳ ಗುಣಮಟ್ಟ ಉತ್ತಮವಾಗಿಲ್ಲದೆ ಇರುವುದರಿಂದ, ದೇಶಾದ್ಯಂತ ಯುಪಿಎಸ್ಸಿ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪರೀಕ್ಷೆಗಳಿಗೆ ತರಬೇತಿ ಒದಗಿಸುವ ಖಾಸಗಿ ಕೋಚಿಂಗ್ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ ಎಂದು ಹೇಳಿದರು.
“ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳನ್ನು ವೈದರು, ಇಂಜಿನಿಯರ್ ಗಳನ್ನಾಗಿಸುತ್ತೇವೆ ಎಂದು ಭರವಸೆ ನೀಡಿ, ಅವರಿಂದ ಶುಲ್ಕ ವಸೂಲಿ ಮಾಡಿದ್ದ ಕೋಚಿಂಗ್ ಸಂಸ್ಥೆಗಳು ನಾಪತ್ತೆಯಾಗಿರುವ ವರದಿಗಳು ಬರುತ್ತಿವೆ. ದೇಶದಲ್ಲಿ ಇಂತಹ ವ್ಯವಸ್ಥಿತ ವೈಫಲ್ಯವಾದಾಗಲೆಲ್ಲ ಸರಕಾರ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು” ಎಂದು ಅವರು ಆಗ್ರಹಿಸಿದರು.
ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಸರಕಾರ ಮತ್ತು ಮಾರುಕಟ್ಟೆಯ ನಡುವೆ ಅಪ್ಪಚ್ಚಿಯಾಗುತ್ತಿದ್ದಾರೆ ಎಂದೂ ಅವರು ಆರೋಪಿಸಿದರು. ಇಂತಹ ಪ್ರಕರಣಗಳಲ್ಲಿ ಸರಕಾರ ಪ್ರತ್ಯಾರೋಪ ಮಾಡುವ ಬದಲು, ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದೇಶದಲ್ಲಿನ ಸರಕಾರಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಿ, ಅವುಗಳನ್ನು ಬಲಪಡಿಸಬೇಕು ಎಂದೂ ಅವರು ಆಗ್ರಹಿಸಿದರು.