ಕಣ್ಣೂರು ಸ್ಫೋಟ: ನಾಲ್ವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಕಣ್ಣೂರು (ಕೇರಳ): ಇಲ್ಲಿಗೆ ಸಮೀಪದ ಪಾಣೂರಿನಲ್ಲಿ ಶುಕ್ರವಾರ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೋಲಿಸರು ಶನಿವಾರ ಬಂಧಿಸಿದ್ದಾರೆ. ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದರು.
ಬಂಧಿತ ಆರೋಪಿಗಳು, ಮೂವರು ಗಾಯಾಳುಗಳು ಮತ್ತು ಮೃತ ವ್ಯಕ್ತಿ ಸಿಪಿಎಂ ಕಾರ್ಯಕರ್ತರು ಅಥವಾ ಬೆಂಬಲಿಗರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ,ಆದರೆ ಇದನ್ನು ಸಿಪಿಎಂ ನಿರಾಕರಿಸಿದೆ.
ನಾಡಬಾಂಬ್ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡಿದ್ದು, ಆ ವೇಳೆ ಸ್ಥಳದಲ್ಲಿದ್ದ ಶೆಬಿನ್ ಲಾಲ್, ಕೆ.ಅತುಲ್, ಕೆ.ಕೆ.ಅರುಣ ಮತ್ತು ಸಯೂಜ್ ಎನ್ನುವವರನ್ನು ಬಂಧಿಸಲಾಗಿದೆ. ಸಯೂಜ್ ನೆರೆಯ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪಾಲಕ್ಕಾಡ್ ನಲ್ಲಿ ಸಿಕ್ಕಿಬಿದ್ದಿದ್ದ ಎಂದು ಪೋಲಿಸರು ತಿಳಿಸಿದರು.
ಗಾಯಾಳುಗಳಾದ ವಿನೀಶ್,ವಿನೋದ್ ಮತ್ತು ಅಶ್ವಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಭಾಗಿಯಾದವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಹಿಂದೆ ಪಕ್ಷದ ಸದಸ್ಯರ ಮೇಲೂ ದಾಳಿ ನಡೆಸಿದ್ದರು ಎಂದು ಹೇಳಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು,ಚುನಾವಣಾ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಅಗತ್ಯ ಪಕ್ಷಕ್ಕಿಲ್ಲ ಮತ್ತು ಸಿಪಿಎಂ ವಿರುದ್ಧ ಇಂತಹ ಆರೋಪಗಳು ಅಪಪ್ರಚಾರವಾಗಿವೆ ಎಂದರು.
ಚುನಾವಣಾ ಪ್ರಕ್ರಿಯೆಗೆ ವ್ಯತ್ಯಯವನ್ನುಂಟು ಮಾಡಲು ಸಿಪಿಎಂ ಕಾರ್ಯಕರ್ತರು ಬಾಂಬ್ ತಯಾರಿಸುತ್ತಿದ್ದರು ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ. ವಡಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಶಾಸಕ ಶಾಫಿ ಪರಂಬಿಲ್ ಮತ್ತು ಆರ್ಎಸ್ಪಿ ಶಾಸಕಿ ಕೆ.ಕೆ.ರೇಮಾ ಅವರು ಶನಿವಾರ ವಡಗರದಲ್ಲಿ ಶಾಂತಿ ಜಾಥಾ ನಡೆಸಿದರು. ಪಕ್ಷದ ನಿರ್ದೇಶನದ ಮೇರೆಗೆ ಸಿಪಿಎಂ ಕಾರ್ಯಕರ್ತರು ಬಾಂಬ್ ತಯಾರಿಸಿದ್ದರು ಎಂದು ಅವರು ಆರೋಪಿಸಿದರು.
ಶುಕ್ರವಾರ ಸಂಭವಿಸಿದ ಸ್ಫೋಟ ರಾಜ್ಯದಲ್ಲಿ ರಾಜಕೀಯ ಅಶಾಂತಿಯನ್ನು ಸೃಷ್ಟಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಘಟನೆಗೆ ಸಿಪಿಎಂ ಪಕ್ಷವನ್ನು ಹೊಣೆಯಾಗಿಸಿವೆ. ಘಟನೆಯಲ್ಲಿ ತನ್ನ ಕೈವಾಡವನ್ನು ಸಿಪಿಎಂ ನಿರಾಕರಿಸಿದೆ.
ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಕೈವೆಲಿಕ್ಕಲ್ ನಿವಾಸಿ ಶೆರಿಲ್ ಕೊಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ, ಇನ್ನೋರ್ವ ಗಾಯಾಳು ವಿನೀಶ್ ಒಂದು ಹಸ್ತವನ್ನು ಕಳೆದುಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದರು.