ಕನ್ವರ್ ಯಾತ್ರೆ ಆದೇಶ: ಉತ್ತರ ಪ್ರದೇಶ, ಉತ್ತರಾಖಂಡ ಸರ್ಕಾರಗಳ ಸೂಚನೆಗೆ ತಡೆಯಾಜ್ಞೆಯನ್ನು ಆ.5ರ ತನಕ ವಿಸ್ತರಿಸಿದ ಸುಪ್ರೀಂ ಕೋರ್ಟ್
ಕನ್ವರ್ ಯಾತ್ರೆ | PC : PTI
ಹೊಸದಿಲ್ಲಿ: ಕನ್ವರ್ ಯಾತ್ರೆಯ ಮಾರ್ಗದುದ್ದಕ್ಕೂ ಇರುವ ಆಹಾರ ಮಳಿಗೆಗಳ ಮಾಲಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂದು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳು ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತನ್ನ ತಡೆಯಾಜ್ಞೆಯನ್ನು ಆಗಸ್ಟ್ 5ರ ತನಕ ವಿಸ್ತರಿಸಿದೆ. ಈ ವರ್ಷದ ಕನ್ವರ್ ಯಾತ್ರೆ ಸೋಮವಾರ ಆರಂಭಗೊಂಡಿದ್ದು ಆಗಸ್ಟ್ 6ರಂದು ಕೊನೆಗೊಳ್ಳಲಿದೆ.
ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಬೆಂಬಲಿಸುವ ತೀರ್ಥಯಾತ್ರಿಗಳ ವಾದವನ್ನು ಸುಪ್ರೀಂ ಕೋರ್ಟ್ ಇಂದು ಆಲಿಸಿದೆ. ಯಾತ್ರೆಯ ಮಾರ್ಗದಲ್ಲಿರುವ ಆಹಾರ ಮಳಿಗೆಗಳು ಶುದ್ಧ ಸಸ್ಯಾಹಾರ ಒದಗಿಸುವುದಿಲ್ಲ. ಸರಸ್ವತಿ ಧಾಬಾ, ಮಾ ದುರ್ಗಾ ಧಾಬಾ ಹೆಸರಿನ ಮಳಿಗೆಗಳಿವೆ, ಇವು ಶುದ್ಧ ಸಸ್ಯಾಹಾರಿ ಎಂದು ತಿಳಿದು ಒಳಗೆ ಹೋದರೆ, ಮಾಲೀಕರು ಮತ್ತು ಉದ್ಯೋಗಿಗಳು ಬೇರೆ ಮತ್ತು ಅಲ್ಲಿ ಮಾಂಸಾಹಾರ ಭಕ್ಷ್ಯಗಳಿರುತ್ತವೆ. ಇದು ನಮ್ಮ ಸಂಪ್ರದಾಯ, ಪದ್ಧತಿಗಳಿಗೆ ವಿರುದ್ಧವಾಗಿದೆ” ಎಂದು ಕನ್ವರಿಯಾಗಳು ನ್ಯಾಯಾಲಯಕ್ಕೆ ಹೇಳಿದರು.
ಯಾವುದೇ ಆಹಾರ ಮಳಿಗೆ ಮಾಲೀಕರಿಗೆ ಅವರ ಹೆಸರನ್ನು ಮಳಿಗೆಯ ಹೊರಗೆ ಸ್ವಯಂಪ್ರೇರಣೆಯಿಂದ ಪ್ರದರ್ಶಿಸುವುದನ್ನು ತಾನು ನಿರ್ಬಂಧಿಸಿಲ್ಲ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಸೋಮವಾರ ನಡೆದ ವಿಚಾರಣೆ ವೇಳೆ ನ್ಯಾಯಾಲಯವು ಸರ್ಕಾರಗಳ ಸೂಚನೆಗೆ ಶುಕ್ರವಾರದ ತನಕ ತಡೆಯಾಜ್ಞೆ ವಿಧಿಸಿದ್ದವು. ಇಂದು ಈ ತಡೆಯಾಜ್ಞೆಯನ್ನು ಆಗಸ್ಟ್ 5ರ ತನಕ ವಿಸ್ತರಿಸಲಾಗಿದೆ.
ಸರ್ಕಾರದ ಸೂಚನೆಗಳು ತಾರತಮ್ಯಕಾರಿ, ಮತೀಯ ಸೌಹಾರ್ದತೆಗೆ ಧಕ್ಕೆ ತರುತ್ತಿವೆ ಮತ್ತು ಜೀವನೋಪಾಯಗಳನ್ನು ಬಾಧಿಸುತ್ತವೆ ಎಂದು ದೂರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠ ನಡೆಸಿದೆ.