ಕನ್ವರ್ ಯಾತ್ರೆ | ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್
PC: PTI
ಹೊಸದಿಲ್ಲಿ : ಕನ್ವರ್ ಯಾತ್ರೆ ಮಾರ್ಗದಲ್ಲಿನ ಉಪಾಹಾರ ಗೃಹಗಳು ತಮ್ಮ ಮಾಲಕರ ಹೆಸರು, ಸಿಬ್ಬಂದಿಗಳು ಹಾಗೂ ಇನ್ನಿತರ ವಿವರಗಳನ್ನು ತಮ್ಮ ಮಳಿಗೆಗಳ ಮುಂದೆ ಪ್ರದರ್ಶಿಸಬೇಕು ಎಂದು ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶ ರಾಜ್ಯಗಳು ಹೊರಡಿಸಿದ್ದ ಮಾರ್ಗಸೂಚಿಯ ವಿರುದ್ಧ ಜುಲೈ 22ರಂದು ನೀಡಿದ್ದ ತನ್ನ ಮಧ್ಯಂತರ ತಡೆಯಾಜ್ಞೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ಮತ್ತೆ ವಿಸ್ತರಿಸಿದೆ.
ಈ ಮಾರ್ಗಸೂಚಿಗಳು ವಿಭಜನಕಾರಿಯಾಗಿದ್ದು, ಮುಸ್ಲಿಮರ ವಿರುದ್ಧ ತಾರತಮ್ಯದಿಂದ ಕೂಡಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಯಾತ್ರೆಯ ಸಂದರ್ಭದಲ್ಲಿ ಈ ಆದೇಶಗಳನ್ನು ಜಾರಿಗೊಳಿಸದಂತೆ ತನ್ನ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶಿಸಿತ್ತು.
ಹಿಂದೂಗಳ ದಿನದರ್ಶಿಯ ಪ್ರಕಾರ, ಪವಿತ್ರ ಮಾಸವಾದ ಶ್ರಾವಣದಲ್ಲಿ ಶಿವಲಿಂಗಗಳಿಗೆ ಜಲಾಭಿಷೇಕ ಮಾಡಲು ವಿವಿಧ ಪ್ರದೇಶಗಳಿಂದ ದೊಡ್ಡ ಸಂಖ್ಯೆಯ ಭಕ್ತಾದಿಗಳು ಗಂಗಾ ನದಿಯಿಂದ ಪವಿತ್ರ ನೀರನ್ನು ಸಂಗ್ರಹಿಸಿ ಕನ್ವರ್ ಗಳೊಂದಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಬಹುತೇಕರು ಮಾಂಸಾಹಾರ ಸೇವನೆಯನ್ನು ವರ್ಜ್ಯ ಎಂದು ಭಾವಿಸಿದ್ದಾರೆ. ಮತ್ತೆ ಕೆಲವರು ಈ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯನ್ನೂ ವರ್ಜಿಸುತ್ತಾರೆ.
ಸಮಯಾಭಾವದಿಂದ ನ್ಯಾ. ಹೃಷಿಕೇಶ್ ರಾಯ್ ಹಾಗೂ ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸದಿದ್ದರೂ, ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿತು.
ಈ ವರ್ಷದ ಜುಲೈ 22ರಂದು ಪ್ರಾರಂಭಗೊಂಡಿರುವ ಶ್ರಾವಣ ಮಾಸವು ಆಗಸ್ಟ್ 19ರವರೆಗೆ ಮುಂದುವರಿಯಲಿದೆ.