ಪ್ರಚೋದನಕಾರಿ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಕಪಿಲ್ ಮಿಶ್ರಾ ಈಗ ದಿಲ್ಲಿ ಬಿಜೆಪಿ ಉಪಾಧ್ಯಕ್ಷ
ಕಪಿಲ್ ಮಿಶ್ರಾ (PTI)
ಹೊಸದಿಲ್ಲಿ: ತಮ್ಮ ಮತೀಯ ಮತ್ತು ಪ್ರಚೋದನಕಾರಿ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ವಿವಾದಿತ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ದಿಲ್ಲಿ ಬಿಜೆಪಿಯ ಉಪಾಧ್ಯಕ್ಷರನ್ನಾಗಿ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಅವರು ನೇಮಿಸಿದ್ದಾರೆ.
2020ರಲ್ಲಿ ದಿಲ್ಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಡ್ಡಿಯುಂಟಾಗಿದ್ದ ರಸ್ತೆಗಳನ್ನು ತಕ್ಷಣ ತೆರವುಗೊಳಿಸುವಂತೆ ದಿಲ್ಲಿ ಪೊಲೀಸರಿಗೆ ಮಿಶ್ರಾ ಕೊನೆಯ ಎಚ್ಚರಿಕೆ ನೀಡಿದ್ದರು.
ಅಲ್ಲದೆ ಅವರ ಪ್ರಚೋದನಕಾರಿ ಟ್ವೀಟ್ಗಳನ್ನು ವಿರೋಧಿಸಿ ವಕೀಲರ ಗುಂಪೊಂದು ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿತ್ತು.
“ದಿಲ್ಲಿ ಪೊಲೀಸರಿಗೆ ಮೂರು ದಿನಗಳ ಗಡುವು-ಜಫ್ರಾಬಾದ್ ಮತ್ತು ಚಾಂದ್ಬಾಗ್ ರಸ್ತೆಗಳನ್ನು ತೆರವುಗೊಳಿಸಿ. ಇದರ ನಂತರ ನಮಗೆ ಅರ್ಥೈಸಬೇಡಿ, ನಾವು ನಿಮ್ಮ ಮಾತುಗಳನ್ನು ಕೇಳೋದಿಲ್ಲ, ಮೂರು ದಿನಗಳು,” ಎಂದು 2020ರಲ್ಲಿ ಟ್ವೀಟ್ ಮಾಡಿದ್ದ ಮಿಶ್ರಾ ತಮ್ಮ ಭಾಷಣದ ವೀಡಿಯೋ ಕೂಡ ಪೋಸ್ಟ್ ಮಾಡಿದ್ದರು.
2020 ರಲ್ಲಿ ಚುನಾವಣಾ ಆಯೋಗವು ಮಿಶ್ರಾ ಅವರ ಕೋಮು ಪ್ರಚೋದಕ ಟ್ವೀಟ್ ತೆಗೆದುಹಾಕುವಂತೆ ಟ್ವಿಟ್ಟರ್ಗೆ ಸೂಚಿಸಿತ್ತು. ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟೀಕಿಸಿ ನಗರದ “ಮಿನಿ-ಪಾಕಿಸ್ತಾನ್ಗಳು” ಎಂದು ಪ್ರತಿಭಟನಾ ಸ್ಥಳಗಳನ್ನು ಉಲ್ಲೇಖಿಸಿರುವುದು ಆಕ್ಷೇಪಾರ್ಹ ಎಂದು ಆಯೋಗ ಹೇಳಿತ್ತು.
ಹಿಂದೆ ದಿಲ್ಲಿಯ ಆಪ್ ಸರ್ಕಾರದ ಸಚಿವರಾಗಿದ್ದ ಕಪಿಲ್ ಮಿಶ್ರಾ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಆಪ್ ತೊರೆದು ಬಿಜೆಪಿ ಸೇರಿದ್ದರು.
2020 ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಮಾಡೆಲ್ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಆಪ್ ಅಭ್ಯರ್ಥಿ ಅಖಿಲೇಶ್ ಪಟಿ ತ್ರಿಪಾಠಿ ಎದುರು ಸೋತಿದ್ದರು.