ಕುಟಿಲ ಮಾರ್ಗದ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್ ಸಿಬಲ್
ಕಪಿಲ್ ಸಿಬಲ್ | PC : PTI
ಹೊಸದಿಲ್ಲಿ: ಬಿಜೆಪಿಯು ಕುಟಿಲ ಮಾರ್ಗಗಳ ಮೂಲಕ ಸರಕಾರಗಳನ್ನು ಅಸ್ಥಿರಗೊಳಿಸುವ ಮತ್ತು ಪತನಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಬೆನ್ನಿಗೇ ಅವರಿಂದ ಈ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, “ಈಗ ಕರ್ನಾಟಕದ ಸರದಿ. ಸರಕಾರಗಳನ್ನು ಕುಟಿಲ ಮಾರ್ಗಗಳ ಮೂಲಕ ಅಸ್ಥಿರಗೊಳಿಸುವ ಹಾಗೂ ಚುನಾಯಿತ ಸರಕಾರಗಳನ್ನು ಪತನಗೊಳಿಸುವ ಬಿಜೆಪಿ ಪ್ರಯತ್ನ. ಶಾಸಕರಿಗೆ ಆಮಿಷ, 10ನೇ ಪರಿಚ್ಛೇದವನ್ನು ದುರುಪಯೋಗ ಮಾಡಿಕೊಳ್ಳುವುದು, ಈಡಿ, ಸಿಬಿಐ ಭೀತಿ ಮೂಡಿಸುವುದು, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಗಳಾಚೆ ವರ್ತಿಸುವುದು ಇವುಗಳಲ್ಲಿ ಸೇರಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಹೀಗಿದ್ದೂ ಅವರು ಹೇಳುತ್ತಾರೆ: ಸಂವಿಧಾನವು ಅವರ ಪಾಲಿಗೆ ಭಗವದ್ಗೀತೆಗಿಂತ ಹೆಚ್ಚು ಎಂದು” ಎಂದು ಅವರು ಕುಟುಕಿದ್ದಾರೆ.
ಇದಕ್ಕೂ ಮುನ್ನ, ಸಂವಿಧಾನ ನಮ್ಮ ಪಾಲಿಗೆ ಭಗವದ್ಗೀತೆಗಿಂತ ಹೆಚ್ಚು ಎಂದು ಹೇಳಿಕೆ ನೀಡಿದ್ದ ಖರ್ಖೌದ ಅಭ್ಯರ್ಥಿ ಪವನ್ ಖಾರ್ಖೋಡ ಹೇಳಿಕೆಯನ್ನು ಉಲ್ಲೇಖಿಸಿ ಅವರು ಮೇಲಿನಂತೆ ಹೇಳಿದ್ದಾರೆ.