"ನಿಮ್ಮ ಮಾತನ್ನು ಮೋದಿ ಆಲಿಸುತ್ತಿದ್ದಾರೆಯೇ?": ಮೋಹನ್ ಭಾಗವತ್ ಭಾಷಣಕ್ಕೆ ಕಪಿಲ್ ಸಿಬಲ್ ವ್ಯಂಗ್ಯ
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯ ದಶಮಿ ಭಾಷಣದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮೋದಿ ನಿಮ್ಮ ಮಾತನ್ನು ಆಲಿಸುತ್ತಿದ್ದಾರೆಯೆ ಎಂದು ವ್ಯಂಗ್ಯವಾಡಿದ್ದಾರೆ.
ದಸರಾ ಅಂಗವಾಗಿ ನಾಗಪುರದ ಆರೆಸ್ಸೆಸ್ ಮುಖ್ಯ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಇಸ್ರೊದ ಮಾಜಿ ಅಧ್ಯಕ್ಷ ಕೆ.ಶಿವನ್ ಉಪಸ್ಥಿತಿಯಲ್ಲಿ ಭಾಷಣ ಮಾಡಿದ್ದ ಮೋಹನ್ ಭಾಗವತ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಮರಸ್ಯದ ಕುರಿತು ಪ್ರತಿಪಾದಿಸಿದ್ದರು.
“ನಮ್ಮ ವೈವಿಧ್ಯತೆ ಯಾವ ಪರಿ ಇದೆಯೆಂದರೆ, ನಾವು ನಮ್ಮ ಸಂತರು ಹಾಗೂ ದೇವರುಗಳನ್ನೂ ವಿಭಜಿಸಿದ್ದೇವೆ. ವಾಲ್ಮೀಕಿ ಜಯಂತಿಯನ್ನು ಕೇವಲ ವಾಲ್ಮೀಕಿ ಕಾಲನಿಯಲ್ಲಿ ಮಾತ್ರ ಏಕೆ ಆಚರಿಸಲಾಗುತ್ತಿದೆ? ವಾಲ್ಮೀಕಿ ಸಂಪೂರ್ಣ ಹಿಂದೂ ಸಮಾಜಕ್ಕೆ ರಾಮಾಯಣ ರಚಿಸಿದರು. ಹೀಗಾಗಿ, ಪ್ರತಿಯೊಬ್ಬರೂ ವಾಲ್ಮೀಕಿ ಜಯಂತಿ ಹಾಗೂ ರವಿದಾಸ್ ಜಯಂತಿಯನ್ನು ಒಟ್ಟಿಗೆ ಆಚರಿಸಬೇಕು. ನಾವು ಈ ಸಂದೇಶದೊಂದಿಗೆ ಸಮಾಜದ ಬಳಿ ಹೋಗುತ್ತೇವೆ” ಎಂದು ಹೇಳಿದ್ದರು.
ಒಂದು ದಿನದ ನಂತರ, ಮೋಹನ್ ಭಾಗವತ್ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, “ಎಲ್ಲ ಹಬ್ಬಗಳನ್ನೂ ಒಟ್ಟಾಗಿ ಆಚರಿಸಬೇಕು. ನನಗೆ ಎಲ್ಲ ಬಗೆಯ ಗೆಳೆಯರೂ ಇದ್ದಾರೆ. ಭಾಷೆ ವಿಭಿನ್ನ ಇರಬಹುದು, ಸಂಸ್ಕೃತಿ ವಿಭಿನ್ನವಿರಬಹುದು, ಆಹಾರ ವಿಭಿನ್ನವಿರಬಹುದು. ಆದರೆ, ಗೆಳೆತನ ಅವರೆಲ್ಲರನ್ನೂ ಒಟ್ಟಿಗೆ ತರುತ್ತದೆ. ಇದನ್ನು ಯಾರು ಆಲಿಸುತ್ತಿದ್ದಾರೆ? ಮೋದಿ ಅಥವಾ ಬೇರೆಯವರೆ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮೋಹನ್ ಭಾಗವತ್ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ಅನೈಕ್ಯತೆ ಬಯಸುವ ಪಕ್ಷಕ್ಕೆ ಆರೆಸ್ಸೆಸ್ ಬೆಂಬಲಿಸುತ್ತಿದೆ ಎಂದು ಟೀಕಿಸಿದ್ದಾರೆ.