ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶ
ಹೊಸದಿಲ್ಲಿ: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನಿರ್ದೇಶಿದೆ.
ಮಳೆ ಕೊರತೆಯಿಂದಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿರುವ ನಡುವೆಯೇ ಈ ನಿರ್ಧಾರ ಹೊರ ಬಿದ್ದಿದೆ.
ಈ ವಿಷಯದ ಕುರಿತು ಚರ್ಚಿಸಲು ಕಾವೇರಿ ಜಲ ನಿಯಂತ್ರಣ ಸಮಿತಿ ದಿಲ್ಲಿಯಲ್ಲಿ ಸೋಮವಾರ ಸಭೆ ನಡೆಸಿತು. ಉಭಯ ರಾಜ್ಯ ಸರಕಾರಗಳ ವಾದವನ್ನು ಆಲಿಸಿದ ಸಮಿತಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.
ಸಭೆಯಲ್ಲಿ ತಮಿಳುನಾಡು ಸರಕಾರ ಮುಂದಿನ 10 ದಿನಗಳ ಕಾಲ ಪ್ರತಿ ದಿನ 24,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ವಾದಿಸಿತು. ಆದರೆ, ಇದನ್ನು ಸಮಿತಿ ತಿರಸ್ಕರಿಸಿತು ಹಾಗೂ ತಮಿಳುನಾಡಿಗೆ 7,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸಲಹೆ ನೀಡಿತು. ಆದರೆ, ಕರ್ನಾಟಕ ಈ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸಾಕಷ್ಟು ಚರ್ಚೆಯ ನಂತರ ಸಮಿತಿಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿದೆ.
ಆದರೆ, ಈ ಬಗ್ಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮಂಗಳವಾರ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ.