ಲೋಕಸಮರಕ್ಕೆ ಹೊರಟ ಬಿಜೆಪಿ, ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕಿಲ್ಲ ಮಣೆ
Photo: PTI
ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ, ಮತಗಳಿಕೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ , ಶಿವರಾಜ್ ಸಿಂಗ್ ಚೌಹಾಣ್, ಸೃತಿ ಇರಾನಿ ಸೇರಿದಂತೆ ಘಟಾನುಘಟಿಗಳ ಹೆಸರಿದೆ. ಆದರೆ 28 ಲೋಕಸಭಾ ಕ್ಷೇತ್ರವಿರುವ ಕರ್ನಾಟಕದಲ್ಲಿ 25 ಲೋಕಸಭಾ ಸಂಸದರು ಬಿಜೆಪಿಯವರಿದ್ದರೂ ಒಂದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯ ಘೋಷಣೆಯಾಗದಿರುವುದು ಚರ್ಚೆಗೆ ಎಡೆ ಮಾಡಿದೆ.
ಮೊದಲ ಪಟ್ಟಿ ಬಿಡುಗಡೆಯಲ್ಲಿ ಕರ್ನಾಟಕಕ್ಕೆ ಅಭ್ಯರ್ಥಿಗಳ ಘೋಷಣೆಯಾಗುವ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದೆ. ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ಎ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ ಅವರಿಗೂ ಟಿಕೆಟ್ ಘೋಷಿಸಲಾಗಿಲ್ಲ.
ಪ್ರಹ್ಲಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಿಂದ 2004 ರಿಂದ ಸತತ 4 ಬಾರಿ ಸಂಸದರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸಕ್ತ ಕೇಂದ್ರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಅವರು ರಾಜ್ಯದ ಹಿರಿಯ ಸಂಸದರಲ್ಲಿ ಓರ್ವರು.
ರಸಗೊಬ್ಬರ ಖಾತೆಯ ಸಚಿವರಾಗಿರುವ ಭಗವಂತ್ ಖೂಬಾ 2014 ರಿಂದ ಬೀದರ್ ಲೋಕಸಭಾ ಕ್ಷೇತ್ರದ ಸಂದರಾಗಿದ್ದಾರೆ. 2019 ರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಎ ನಾರಾಯಣಸ್ವಾಮಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು. 2014 ರಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆಯಾಗಿದ್ದಾರೆ.
ಸತತ 6 ಬಾರಿ ಸಂಸದರಾದ ರಮೇಶ್ ಜಿಗಜಿಣಗಿ ಅವರ ಹೆಸರೂ ಪಟ್ಟಿಯಲ್ಲಿಲ್ಲ. 1996 ರಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಿರುವ ಅನಂತ್ ಕುಮಾರ್ ಹೆಗಡೆ ಅವರಿಗೂ ಮಣೆ ಹಾಕಿಲ್ಲ. ಹಿಂದುತ್ವ ವಿಚಾರಗಳಿಗೆ ಸದಾ ಮುಂಚೂಣಿಯಲ್ಲಿರುವ ಅನಂತ್ ಕುಮಾರ್ ಹೆಗಡೆ ಅವರ ಹೆಸರು ಪಟ್ಟಿಯಲ್ಲಿರುವ ನಿರೀಕ್ಷೆಯಿತ್ತು.
ಇದಲ್ಲದೇ ಬಿಜೆಪಿಯ ಹಿರಿಯ ಸಂಸದರಾದ ದಾವಣಗೆರೆಯ ಜಿ ಎಂ ಸಿದ್ದೇಶ್ವರ, ಬಾಗಲಕೋಟೆ ಸಂಸದ ಗದ್ದಿಗೌಡರ್, ಬೆಂಗಳೂರು ಉತ್ತರದ ಸದಾನಂದ ಗೌಡ, ಬೆಂಗಳೂರು ಸೆಂಟ್ರಲ್ ನ ಪಿ ಸಿ ಮೋಹನ್, ಮಂಗಳೂರಿನ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ಅವರ ಹೆಸರುಗಳೂ ಪಟ್ಟಿಯಲ್ಲಿಲ್ಲ.
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಹೆಸರು ಪಟ್ಟಿಯಲ್ಲಿರದಿರುವುದು, ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಿಸಲು ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿರುವಂತೆ ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಘೋಷಣೆಯಾದ ಪಟ್ಟಿಯಲ್ಲಿ ಬಿಜೆಪಿ ಯುವ ಮುಖಗಳಿಗೆ ಮಣೆ ಹಾಕಿರುವುದು, ಕರ್ನಾಟಕದಲ್ಲೂ ಅದೇ ತಂತ್ರಕ್ಕೆ ಸಿದ್ಧವಾಗಿರುವಂತೆ ಕಂಡು ಬರುತ್ತಿದೆ.