5 ತಿಂಗಳಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ 244.52 ಟಿಎಂಸಿ ಅಡಿ ಕಾವೇರಿ ನೀರು
50 ಟಿಎಂಸಿ ಅಡಿ ನೀರು ಸಮುದ್ರಪಾಲು
ಚೆನ್ನೈ : ಈ ವರ್ಷದ ಜೂನ್ ಹಾಗೂ ಅಕ್ಟೋಬರ್ ನಡುವೆ ಕರ್ನಾಟಕದಿಂದ 244.52 ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡು ಪಡೆದುಕೊಂಡಿದ್ದು, ಇದು ಅದಕ್ಕೆ ಅಗತ್ಯವಿರುವ 143.36 ಟಿಎಂಸಿ ಅಡಿ ಮಿತಿಯನ್ನು ದಾಟಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 101.16 ಟಿಎಂಸಿ ಅಡಿ ಕೂಡಾ ಆ ರಾಜ್ಯಕ್ಕೆ ಹರಿದುಹೋಗಿದೆ. ಈ ಪೈಕಿ, ಸುಮಾರು 50 ಟಿಎಂಸಿ ಅಡಿ ನೀರನ್ನು ಸಮುದ್ರಕ್ಕೆ ಬಿಡಲಾಗಿದೆ ಎಂದು ತಮಿಳುನಾಡಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡಿನ ಜಲಸಂಪನ್ಮೂಲಗಳ ಇಲಾಖೆ (ಡಬ್ಲ್ಯುಆರ್‌ಡಿ)ಯ ದತ್ತಾಂಶ ಪ್ರಕಾರ, ಮೆಟ್ಟೂರು ಜಲಾಶಯದಿಂದ ಪ್ರಸಕ್ತ ಬುಧವಾರ 74,100 ಎಂಸಿ ಅಡಿ (79.28 ಶೇ.) ನೀರನ್ನು ಹೊಂದಿದ್ದು, ಅದರ ಒಟ್ಟು ಸಾಮರ್ಥ್ಯ 93,470 ಎಂಸಿ ಅಡಿ ಆಗಿದೆ.
ಈಶಾನ್ಯ ಮುಂಗಾರು ಋತುವಿನಲ್ಲಿ ಜನವರಿ ಮಧ್ಯದವರೆಗೆ ಸಮರ್ಪಕ ಮಳೆಯಾಗುವ ನಿರೀಕ್ಷೆಯಿದ್ದು, ಮುಂಬರುವ ಬೇಸಿಗೆಯಲ್ಲಿ ತಮಿಳುನಾಡಿಗೆ ಬೇಕಾದ ನೀರಿನ ಅಗತ್ಯವನ್ನು ಅದು ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ನದಿ ಮುಖಜಭೂಮಿಯ ನೀರಾವರಿ ಜಮೀನುಗಳಿಗೆ ಪ್ರಯೋಜವಾಗಲು ನೀರಿನ ಸಂಗ್ರಹ ಸಾಮರ್ಥ್ಯನ್ನು ವಿಸ್ತರಿಸುವಂತೆಯೂ ತಮಿಳುನಾಡು ರೈತರು, ಆ ರಾಜ್ಯದ ಸರಕಾರವನ್ನು ಆಗ್ರಹಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.