ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಕರ್ನಾಟಕ ಪ್ರಥಮ: ಕಲಾ ಪ್ರತಿಭೆಯಾಗಿ ಸಾಹಿಲ್ ದಾವಣಗೆರೆ ಆಯ್ಕೆ
(ಸಾಹಿಲ್ ದಾವಣಗೆರೆ)
ಗೋವಾ: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಸಮಿತಿಯು ಹಮ್ಮಿಕೊಂಡ 'ಸಾಹಿತ್ಯೋತ್ಸವ' ಸ್ಪರ್ಧಾ ಕೂಟದಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದ್ದು, 'ಸ್ಟಾರ್ ಆಫ್ ಫೆಸ್ಟ್' ಕಲಾ ಪ್ರತಿಭೆಯಾಗಿ ಹಾವೇರಿ ಮುಈನುಸ್ಸುನ್ನಾ ಸಂಸ್ಥೆಯ ವಿದ್ಯಾರ್ಥಿ ಸಾಹಿಲ್ ದಾವಣಗೆರೆ ಆಯ್ಕೆಯಾಗಿದ್ದಾರೆ.
ಗೋವಾದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ 26 ರಾಜ್ಯಗಳ ಬಹುಮುಖ ಪ್ರತಿಭೆಗಳು ಸ್ಪರ್ಧಿಸಿದ್ದು, ಕರ್ನಾಟಕ ಪ್ರಥಮ ಸ್ಥಾನಗಳಿಸಿದೆ. ಕಾಶ್ಮೀರ ದ್ವಿತೀಯ ಮತ್ತು ಕೇರಳ ತೃತೀಯ ಸ್ಥಾನಗಳನ್ನು ಪಡೆದಿವೆ.
ಗರಿಷ್ಠ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ಉರ್ದು ಹಾಡುಗಾರ ಮುಹಮ್ಮದ್ ಸಾಹಿಲ್ 'ಕಲಾ ಪ್ರತಿಭೆ' ಪುರಸ್ಕೃತರಾಗಿದ್ದಾರೆ. ದಾವಣಗೆರೆ ನಿವಾಸಿಗಳಾದ ಶಫೀ ಸಾಹೆಬ್ ಮತ್ತು ಸಬ್ರೀನ್ ಬಾನು ಅವರ ಪುತ್ರ ಸಾಹಿಲ್ ಹಾವೇರಿ ಮುಈನುಸ್ಸುನ್ನಾದ ಸವನೂರು ಕ್ಯಾಂಪಸ್ ನಲ್ಲಿ ಹೈಸ್ಕೂಲ್ ಮತ್ತು ದರ್ಸ್ ವಿದ್ಯಾರ್ಥಿಯಾಗಿದ್ದಾರೆ.
ಮೂರು ದಿನಗಳಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮಗಳ ಸಮಾರೋಪದಲ್ಲಿ ಆಧ್ಯಾತ್ಮ ಗುರು ಶೈಖ್ ಸಲಾಹುದ್ದೀನ್ ಸಮುರಾಯ್, ಅಲ್ಲಾಮಾ ಸಈದ್ ಅಶ್ರಫಿ ರಾಜಸ್ಥಾನ, ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಆಲಂ ಮಿಸ್ಬಾಹಿ ಒರಿಸ್ಸಾ, ಮಾಜಿ ಅಧ್ಯಕ್ಷರಾದ ಡಾ. ಫಾರೂಖ್ ನಈಮಿ, ಶೌಕತ್ ಬುಖಾರಿ ಕಾಶ್ಮೀರ ಪ್ರಶಸ್ತಿ ವಿತರಿಸಿದರು.