25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ಮಹಿಳೆ ಹಿಮಾಚಲ ಪ್ರದೇಶದ ವೃದ್ಧಾಶ್ರಮದಲ್ಲಿ ಪತ್ತೆ!
ಕನ್ನಡಿಗ ಐಪಿಎಸ್ ಅಧಿಕಾರಿ ರವಿನಂದನ್ ಅವರ ಪ್ರಯತ್ನದಿಂದ ಮನೆ ಸೇರಿದ ಸಾಕಮ್ಮ
PC : indiatoday.in
ಹೊಸದಿಲ್ಲಿ : 25 ವರ್ಷಗಳ ಹಿಂದೆ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡ ಕರ್ನಾಟಕದ 50 ವರ್ಷದ ಮಹಿಳೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪತ್ತೆಯಾಗಿದ್ದಾರೆ.
ಅಲ್ಲಿನ ವೃದ್ಧಾಶ್ರಮದಲ್ಲಿದ್ದ ಮಹಿಳೆ ಸಾಕಮ್ಮ ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡು ಬುಧವಾರ ತನ್ನ ತವರು ರಾಜ್ಯಕ್ಕೆ ಮರಳಲಿದ್ದಾರೆ.
ಕರ್ನಾಟಕದ ಬಳ್ಳಾರಿಯ ಡಣನಾಯಕನಕೆರೆ ಗ್ರಾಮದ ಸಾಕಮ್ಮ 25 ವರ್ಷಗಳ ಹಿಂದೆ ಹೊಸಪೇಟೆಯಲ್ಲಿ ಸಂಬಂಧಿಕರ ಮದುವೆಗೆ ಮಕ್ಕಳೊಂದಿಗೆ ಬಂದಿದ್ದರು. ಆಕಸ್ಮಿಕವಾಗಿ ಅವರು ಚಂಡೀಗಢಕ್ಕೆ ತೆರಳುವ ರೈಲನ್ನು ಹತ್ತಿದ್ದರು.
A women from Dananayakanakere Hospet Karnataka has reached Uttarakhand by unknowingly and trying hard to meet her family,plz help us to reach her family and unite them. Thanks to Ravinandan IPS & Naveen sir for sharing this video #hospet #karnataka #dananayakanakere #missing pic.twitter.com/6R3aKnznli
— Vijay Kumar G (@jnvijay07) December 19, 2024
ದಾರಿ ತಪ್ಪಿದ ಅವರು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸಂಕಷ್ಟದ ದಿನ ದೂಡಿದರು. ಪತ್ತೆಯಾಗದ ಹಿನ್ನೆಲೆಯಲ್ಲಿ ಸಾಕಮ್ಮನ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ಇಷ್ಟು ವರ್ಷಗಳಾದರೂ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂತ್ಯ ಸಂಸ್ಕಾರವನ್ನೂ ಮಾಡಿದ್ದರು.
ಯುವ ಐಪಿಎಸ್ ಅಧಿಕಾರಿ ರವಿನಂದನ್ ಅವರು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಮಹಿಳೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಕಂಡು ಮೂಲ ಪತ್ತೆ ಹಚ್ಚುವ ಪ್ರಯತ್ನ ಮಾಡಲಾಯಿತು.
ಸಾಕಮ್ಮನ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿದರು. ಸತತ ಪ್ರಯತ್ನದ ನಂತರ ಅಧಿಕಾರಿಗಳು ಕುಟುಂಬದೊಂದಿಗೆ ಸಂಪರ್ಕವನ್ನು ಸಾಧಿಸಿದ್ದಾರೆ.