ಕಾಶ್ಮೀರ ಎನ್ಕೌಂಟರ್: 100 ಗಂಟೆಗೂ ಹೆಚ್ಚು ಅವಧಿಗೆ ಮುಂದುವರಿದ ಕಾರ್ಯಾಚರಣೆ
Photo: NDTV
ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ರಾಜ್ಯದ ಅನಂತನಾಗ್ ಜಿಲ್ಲೆಯ ದಟ್ಟಾರಣ್ಯದಲ್ಲಿ ಅಡಗಿ ಕುಳಿತಿರುವ ಉಗ್ರರು ಸದ್ಯ ಗುಂಡಿನ ದಾಳಿಯನ್ನು ಸ್ಥಗಿತಗೊಳಿಸಿದ್ದು, ನೂರು ಗಂಟೆಗೂ ಹೆಚ್ಚು ಅವಧಿಯಿಂದ ಮುಂದುವರಿದಿರುವ ಈ ಕಾರ್ಯಾಚರಣೆಯಲ್ಲಿ ಮೂವರು ಹಿರಿಯ ಭದ್ರತಾಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಮಂಗಳವಾರ ಶುರುವಾದ ಎನ್ಕೌಂಟರ್ ಕಾರ್ಯಾಚರಣೆಯು ಇಂದಿಗೆ ಐದನೆ ದಿನಕ್ಕೆ ಕಾಲಿರಿಸಿದ್ದು, ಭದ್ರತಾ ಪಡೆಗಳು ಉಗ್ರರನ್ನು ಹೊಡೆದುರುಳಿಸಿವೆಯೊ ಅಥವಾ ಅವರಿನ್ನೂ ದಟ್ಟಾರಣ್ಯದಲ್ಲಿ ಅಡಗಿ ಕುಳಿತಿದ್ದಾರೆಯೊ ಅಥವಾ ಅಲ್ಲಿಂದ ಪರಾರಿಯಾಗಿದ್ದಾರೊ ಎಂಬುದು ಈವರೆಗೆ ದೃಢಪಟ್ಟಿಲ್ಲ.
ಅರಣ್ಯದ ಮಧ್ಯಭಾಗದಲ್ಲಿದ್ದ ಉಗ್ರರ ಅಡಗು ತಾಣಗಳನ್ನು ಬುಧವಾರ ಭದ್ರತಾ ಪಡೆಗಳು ಸುತ್ತುವರಿದಾಗ, ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಭದ್ರತಾಧಿಕಾರಿಗಳು ಮೃತಪಟ್ಟಿದ್ದಾರೆ.
ಕಡಿದಾದ ಕಣಿವೆ ಪ್ರದೇಶದಿಂದ ಪ್ರತಿಕೂಲ ಹವಾಮಾನದವರೆಗೆ ಈವರೆಗೆ ಇಲ್ಲಿನ ಭೌಗೋಳಿಕ ಪ್ರದೇಶವು ಭದ್ರತಾ ಪಡೆಗಳಿಗೆ ಕ್ಲಿಷ್ಟಕರವಾಗಿದೆ. ಹೀಗಿದ್ದೂ ಭದ್ರತಾ ಪಡೆಗಳು ತಮ್ಮ ದಣಿವರಿಯದ ಹೋರಾಟವನ್ನು ಮುಂದುವರಿಸಿದ್ದು, ಉಗ್ರರ ಬೇಟೆಗಾಗಿ ಡ್ರೋನ್ ಗಳನ್ನು ಬಳಸುತ್ತಿವೆ.
ಲಷ್ಕರ್-ಇ-ತೈಬಾ ಉಗ್ರಗಾಮಿ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ಅಥವಾ ಮೂವರು ಉಗ್ರರು ತಮಗೆ ಅನುಕೂಲಕವಾಗಿರುವ ಗಡೋಲ್ ಅರಣ್ಯದಲ್ಲಿನ ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂದು ಹೇಳಲಾಗಿದೆ. ದಟ್ಟಾರಣ್ಯಗಳು, ಬೆಟ್ಟಗಳು ಹಾಗೂ ಪ್ರಪಾತಗಳು ಆ ಪ್ರದೇಶವನ್ನು ವಿಪರೀತ ಅಪಾಯಕಾರಿಯನ್ನಾಗಿಸಿದೆ. ಈ ಪ್ರದೇಶವು ಪೀರ್ ಪಂಜಲ್ ವಲಯಕ್ಕೂ ಹೊಂದಿಕೊಂಡಿದೆ.
ಬುಧವಾರ ಉಗ್ರರ ಅಡಗುತಾಣವನ್ನು ತಲುಪಲು ಇದ್ದ ಏಕೈಕ ಮಾರ್ಗವನ್ನು ಭದ್ರತಾ ತಂಡವೊಂದು ಆಯ್ದುಕೊಂಡಿತಾದರೂ, ಉಗ್ರರಿಂದ ತೀವ್ರ ಗುಂಡಿನ ದಾಳಿಗೆ ಗುರಿಯಾಯಿತು. ಒಂದು ಕಡೆ ಬೆಟ್ಟಗಳು ಹಾಗೂ ಮತ್ತೊಂದೆಡೆ ಪ್ರಪಾತಗಳ ನಡುವೆ ಭದ್ರತಾ ಸಿಬ್ಬಂದಿಗಳು ಸಿಲುಕಿಕೊಂಡಿದ್ದರಿಂದ, ಅವರಿಗೆ ಯಾವುದೇ ರಕ್ಷಣೆ ಇಲ್ಲದಂತಾಯಿತು ಎಂದು ವರದಿಯಾಗಿದೆ.
ಉಗ್ರರ ಗುಂಡಿನ ದಾಳಿಯಲ್ಲಿ ಸೇನೆಯ ಯೋಧರಾದ ಕರ್ನಲ್ ಮನ್ ಪ್ರೀತ್ ಸಿಂಗ್ ಹಾಗೂ ಮೇಜರ್ ಆಶಿಶ್ ಧೋಂಚಕ್ ಹಾಗೂ ಪೊಲೀಸ್ ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧ ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗಿದೆ.
ಶನಿವಾರ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಎನ್ ಕೌಂಟರ್ ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಉಗ್ರರು ನಿಪುಣ ತರಬೇತಿ ಪಡೆದಿದ್ದು, ಅವರ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಂಗ್ರಹವಿದೆ ಎಂದು ಶಂಕಿಸಲಾಗಿದೆ.