ಕಾಶ್ಮೀರ: ಕಮರಿಗೆ ಉರುಳಿದ ವಾಹನ, ಕೇರಳದ ನಾಲ್ವರು ಪ್ರವಾಸಿಗರ ಸಹಿತ ಐವರು ಸಾವು
Photocradit : etvbharat.com
ಶ್ರೀನಗರ : ಕೇಂದ್ರ ಕಾಶ್ಮೀರದ ಗಂದೇರ್ಬಾಲ್ ಜಿಲ್ಲೆಯ ರೆಜಿಲಾ ಪಾಸ್ನ ರಸ್ತೆಯಲ್ಲಿ ಮಂಗಳವಾರ ವಾಹನವೊಂದು ಸ್ಕಿಡ್ ಆಗಿ ಕಮರಿಗೆ ಉರುಳಿ ಸಂಭವಿಸಿದ ದುರಂತದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಾಲ್ವರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನಮಾರ್ಗ್ನತ್ತ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ವಾಹನ ಸ್ಕಿಡ್ ಆಗಿ ಕಮರಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ಸುದೇಶ್, ವಿಘ್ನೇಶ್, ರಾಹುಲ್, ಅನಿಲ್ ಹಾಗೂ ವಾಹನ ಚಾಲಕ ಏಜಾಝ್ ಅಹ್ಮದ್ ಆವಾನ್ ಎಂದು ಗುರುತಿಸಲಾಗಿದೆ.
ದುರಂತದಲ್ಲಿ ಅರುಣ್ ಹಾಗೂ ಮಹಾದೇವ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಚಿಂಚಾಜನಕವಾಗಿದ್ದು, ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಾಗಿ ಎಸ್ಕೆಎಂಎಸ್ ಸೌರಾಕ್ಕೆ ವರ್ಗಾಯಿಸಲಾಗಿದೆ.
ಗುಂಪೊಂದು ಪನ್ನಿಮತ್ ಪಾಸ್ನಲ್ಲಿ ಸ್ಕೈಯಿಂಗ್ನಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ರೆಜಿಲಾ ಪಾಸ್ನಲ್ಲಿರುವ ಜೀರೋ ಪಾಯಿಂಟ್ನಲ್ಲಿ ವಾಹನ ಸ್ಕಿಡ್ ಆಗಿ ಕಮರಿಗೆ ಉರುಳಿತು. ಈ ಸಂದರ್ಭ ಚಾಲಕ ಏಜಾಝ್ ಅಹ್ಮದ್ ಅವಾನ್ ಅವರು ವಾಹನದಿಂದ ಹಾರಲು ಪ್ರಯತ್ನಿಸಿದರು. ಆದರೆ, ವಿಫಲರಾಗಿ ಮೃತಪಟ್ಟರು.
ಈ ದುರಂತದ ಸಂಭವಿಸಿದ ಕೂಡಲೇ ಬೇಕನ್ ನಿಯಂತ್ರಣ ಕೊಠಡಿ ಪೊಲೀಸ್ ಹಾಗೂ ಸೇನೆಯನ್ನು ಸಂಪರ್ಕಿಸಿತು ಹಾಗೂ ಶೋಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿತು. ಶೋಧ ಕಾರ್ಯಚರಣೆ ಸಂದರ್ಭ 8 ಪ್ರವಾಸಿಗರಲ್ಲಿ ನಾಲ್ವರು ಮೃತಪಟ್ಟಿರುವುದು ಬೆಳಕಿಗೆ ಬಂತು ಎಂದು ಅವರು ತಿಳಿಸಿದ್ದಾರೆ.