ಪ್ರಧಾನಿ ಕಚೇರಿ ಅಧಿಕಾರಿ ಎಂದು ಬಿಂಬಿಸಿಕೊಂಡ ವಂಚಕನ ಬಂಧನ
ಸೈಯ್ಯದ್ ಇಶಾನ್ ಬುಖಾರಿ
ಭುವನೇಶ್ವರ: ತಾನು ಪ್ರಧಾನಿ ಕಚೇರಿ ಅಧಿಕಾರಿ, ನರಶಾಸ್ತ್ರಜ್ಞ, ಸೇನೆಯ ವೈದ್ಯ, ರಾಷ್ಟ್ರೀಯ ತನಿಖಾ ತಂಡದ ಉನ್ನತ ಅಧಿಕಾರಿಗಳ ಸಹಚರ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಗುರುತಿನಿಂದ ಬಿಂಬಿಸಿಕೊಂಡ ಕಾಶ್ಮೀರ ಮೂಲದ 37 ವರ್ಷ ವಯಸ್ಸಿನ ವಂಚಕನನ್ನು ಒಡಿಶಾದ ಜಾಜ್ಪುರ ಜಿಲ್ಲೆಯ ವಿಶೇಷ ಕಾರ್ಯಪಡೆ ಅಧಿಕಾರಿಗಳು ಬಂಧಿಸಿದ್ದಾರೆ.
ಸೈಯ್ಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಕಾರಿ ಅಥವಾ ಡಾ.ಇಶಾನ್ ಬುಕಾರಿ ಮೂಲತಃ ಕಾಶ್ಮೀರದ ಕುಪ್ವಾರದವನು. ಜಾಜ್ಪುರ ಜಿಲ್ಲೆಯ ನೂಲ್ಪುರ ಪ್ರದೇಶದಲ್ಲಿ ರಾಜ್ಯ ಅಪರಾಧ ತನಿಖೆ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
"ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಈತ ಕಾಶ್ಮೀರ ಪೊಲೀಸರಿಗೆ ಬೇಕಾಗಿದ್ದ. ಈತನ ವಿರುದ್ಧ ಒಂದು ಜಾಮೀನು ರಹಿತ ವಾರೆಂಟ್ ಕೂಡಾ ಇದೆ" ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಜೈ ನಾರಾಯಣ ಪಂಕಜ್ ಹೇಳಿದ್ದಾರೆ.
ಪೊಲೀಸರು ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಹಲವು ಐಡಿ ಕಾರ್ಡ್ಗಳು, ಆಧಾರ್, ಡೆಬಿಟ್ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈತನಿಂದ ವಶಪಡಿಸಿಕೊಂಡಿರುವ ನಾಲ್ಕು ಮೊಬೈಲ್ ಕಾರ್ಡ್ಗಳನ್ನು ತನಿಖೆಗಾಗಿ ಕಳುಹಿಸಲಾಗಿದ್ದು, ಈತನ ವಂಚನೆ ಮತ್ತು ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ ಮತ್ತು ಒಡಿಶಾ ಸೇರಿ ದೇಶದ ವಿವಿಧೆಡೆಗಳಲ್ಲಿ 6-7 ಯುವತಿಯರನ್ನು ಈತ ವಿವಾಹವಾಗಿದ್ದ. ಹಲವು ವೆಬ್ಸೈಟ್ಗಳಲ್ಲಿ ಸಕ್ರಿಯನಾಗಿದ್ದ ಈತ ಹಲವು ಅಂತರರಾಷ್ಟ್ರೀಯ ಪದವಿಗಳನ್ನು ಹೊಂದಿರುವ ವೈದ್ಯ ಎಂದು ಬಿಂಬಿಸಿಕೊಂಡು ಹಲವು ಯುವತಿಯರ ಜತೆ ಪ್ರಣಯ ಸಂಬಂಧ ಹೊಂದಿದ್ದ ಎಂದು ಆಪಾದಿಸಲಾಗಿದೆ.