ಚಳಿಯಿಂದ ಗಡಗುಟ್ಟುತ್ತಿರುವ ಕಾಶ್ಮೀರ | ಮೈನಸ್ 9.2 ಡಿ.ಸೆ. ಕನಿಷ್ಠ ತಾಪಮಾನ

ಸಾಂದರ್ಭಿಕ ಚಿತ್ರ (PTI)
ಶ್ರೀನಗರ : ಕಾಶ್ಮೀರದಲ್ಲಿ 40 ದಿನಗಳ ತೀವ್ರ ಚಳಿಗಾಲ ‘ಚಿಲ್ಲಾಯಿ-ಕಲಾನ್’ ಶನಿವಾರದಿಂದ ಆರಂಭಗೊಂಡಿದ್ದು, ಶ್ರೀನಗರವು ಶುಕ್ರವಾರ ಮೈನಸ್ 6.2 ಡಿ.ಸೆ.ಕನಿಷ್ಠ ತಾಪಮಾನದೊಂದಿಗೆ ಋತುಮಾನದ ಅತ್ಯಂತ ತಣ್ಣನೆಯ ರಾತ್ರಿಯನ್ನು ಅನುಭವಿಸಿದೆ.
ಪಾಂಪೋರ್ ಪಟ್ಟಣದ ಹೊರವಲಯದಲ್ಲಿರುವ ಕೊನಿಬಾಲ್ನಲ್ಲಿ ಕಣಿವೆಯಲ್ಲಿಯ ಅತ್ಯಂತ ಕನಿಷ್ಠ ತಾಪಮಾನ ಮೈನಸ್ 9.2 ಡಿ.ಸೆ.ದಾಖಲಾಗಿದೆ.
ಶ್ರೀನಗರದ ಪ್ರಸಿದ್ಧ ದಾಲ್ ಸರೋವರ ಸೇರಿದಂತೆ ನದಿ-ಸರೋವರಗಳ ಮೇಲ್ಪದರ ಹೆಪ್ಪುಗಟ್ಟಿದೆ. ಹಲವಾರು ಪ್ರದೇಶಗಳಲ್ಲಿ ನೀರು ಪೂರೈಕೆ ಕೊಳವೆಗಳೂ ಹೆಪ್ಪುಗಟ್ಟಿವೆ. ಕೆಮ್ಮು,ಸಾಮಾನ್ಯ ಶೀತ ಸಮಸ್ಯೆಗಳು ಉಲ್ಬಣಗೊಂಡಿವೆ.
ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರಗಳಲ್ಲೊಂದಾಗಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಮೈನಸ್ 8.2 ಡಿ.ಸೆ.ಕನಿಷ್ಠ ತಾಪಮಾನ ದಾಖಲಾಗಿದ್ದರೆ,ಪ್ರವಾಸಿ ಸ್ಥಳ ಗುಲ್ಮಾರ್ಗ್ನಲ್ಲಿ ಮೈನಸ್ 6 ಡಿ.ಸೆ.ಆಗಿತ್ತು.
ಕಾಶ್ಮೀರದ ಗೇಟ್ವೇ ಅಗಿರುವ ಕಾಜಿಗುಂದದಲ್ಲಿ 7.6 ಡಿ.ಸೆ.ಕನಿಷ್ಠ ತಾಪಮಾನ ದಾಖಲಾಗಿದೆ.
ಕಣಿವೆಯಲ್ಲಿ ಡಿ.26ರವರೆಗೆ ಒಣಗಾಳಿ ಬೀಸಲಿದೆ ಮತ್ತು ಡಿ.21-22ರ ಮತ್ತು ಡಿ.27-28ರ ರಾತ್ರಿ ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಕಣಿವೆಯಲ್ಲಿ ಕನಿಷ್ಠ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಚಿಲ್ಲಾಯಿ ಕಲಾನ್ ಮುಂದಿನ ವರ್ಷದ ಜ.31ರಂದು ಅಂತ್ಯಗೊಳ್ಳಲಿದೆ. ಆದರೆ ಶೀತಮಾರುತವು ಮುಂದಿನ 20 ದಿನಗಳ ಕಾಲ ‘ಚಿಲ್ಲಾಯಿ-ಖುರ್ದ್’ ಮತ್ತು 10 ದಿನಗಳ ‘ಚಿಲ್ಲಾಯಿ-ಬಚ್ಚಾ’ಅವಧಿಗಳಲ್ಲಿ ಮುಂದುವರಿಯಲಿದೆ.