ಮುಖ್ಯಮಂತ್ರಿಯಾಗಿ ಹಿಂದಿನಂತೆಯೇ ಕೇಜ್ರಿವಾಲ್ ಕಾರ್ಯನಿರ್ವಹಣೆ : ಆಪ್
ಅರವಿಂದ್ ಕೇಜ್ರಿವಾಲ್| PTI
ಹೊಸದಿಲ್ಲಿ : ಅರವಿಂದ್ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿಯಾಗಿ ಮೊದಲಿನಂತೆಯೇ ಕಾರ್ಯನಿರ್ವಹಿಸಲಿದ್ದಾರೆ ಮತ್ತು ರಾಜ್ಯದ ಜನತೆಯ ಯಾವುದೇ ಕೆಲಸ ಬಾಕಿಯಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ (ಆಪ್)ವು ಶನಿವಾರ ಹೇಳಿದೆ.
ಕೇಜ್ರಿವಾಲ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ಬಳಿಕ, ಪಕ್ಷ ಈ ಹೇಳಿಕೆ ನೀಡಿದೆ.
ದಿಲ್ಲಿ ರಾಜ್ಯದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಜ್ರಿವಾಲ್ರಿಗೆ ಜಾಮೀನು ನೀಡಿದೆ. ಇದೇ ವಿಷಯದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ವು ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ಸುಪ್ರೀಂ ಕೋರ್ಟ್ ಎರಡು ತಿಂಗಳ ಹಿಂದೆಯೇ ಜಾಮೀನು ನೀಡಿತ್ತು. ಹಾಗಾಗಿ, ಕೇಜ್ರಿವಾಲ್ ಶುಕ್ರವಾರವೇ ತಿಹಾರ್ ಜೈಲಿನಿಂದ ಹೊರಗೆ ಬಂದಿದ್ದಾರೆ.
ವಿವಾದಿತ ಅಬಕಾರಿ ನೀತಿ ಈಗ ರದ್ದುಗೊಂಡಿದೆ. ನ್ಯಾಯಾಲಯವು ಕೇಜ್ರಿವಾಲ್ರಿಗೆ ಹಲವು ಶರತ್ತುಗಳನ್ನೂ ವಿಧಿಸಿದೆ. ಅವರು ಮುಖ್ಯಮಂತ್ರಿ ಕಚೇರಿ ಮತ್ತು ದಿಲ್ಲಿ ಸರಕಾರದ ಕಾರ್ಯಾಲಯಕ್ಕೆ ಹೋಗಬಾರದು ಹಾಗೂ ಅತ್ಯಗತ್ಯವಲ್ಲದಿದ್ದರೆ ಯಾವುದೇ ಸರಕಾರಿ ಕಡತಗಳಿಗೆ ಸಹಿ ಹಾಕಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಗಾರಿದರು. ‘‘ಸುಳ್ಳು’’ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ರನ್ನು ಜೈಲಿಗೆ ಕಳುಹಿಸಿರುವುದಕ್ಕಾಗಿ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂಬ ಸುಳ್ಳನ್ನು ಬಿಜೆಪಿ ಹರಡುತ್ತಿದೆ ಎಂದು ಅವರು ಆರೋಪಿಸಿದರು. ‘‘ಈ ಸುಳ್ಳನ್ನು ಹರಡಿರುವುದಕ್ಕಾಗಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಠೇವಣಿ ಕಳೆದುಕೊಳ್ಳುವಂತೆ ದಿಲ್ಲಿಯ ಜನರು ಮಾಡಲಿದ್ದಾರೆ’’ ಎಂದು ಅವರು ಹೇಳಿದರು.