ಕೇಜ್ರಿವಾಲ್ ವಿರುದ್ಧ ಕಾನೂನುಕ್ರಮಕ್ಕೆ ಈಡಿಗೆ ಕೇಂದ್ರದ ಅನುಮತಿ
ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಗೃಹ ಸಚಿವಾಲಯವು ಜಾರಿನಿರ್ದೇಶನಾಲಯಕ್ಕೆ ಅನುಮತಿಯನ್ನು ನೀಡಿದೆ.ದಿಲ್ಲಿ ನ್ಯಾಯಾಲಯದಲ್ಲಿ ಕೇಜ್ರಿವಾಲ್ ವಿರುದ್ಧ ದೋಷಾರೋಪಣೆ ದಾಖಲಾತಿ ಬಾಕಿಯಿರುವಂತೆಯೇ, ಕೇಂದ್ರದ ಈ ನಡೆಯು ಆಪ್ ನಾಯಕನಿಗೆ ಭಾರೀ ದೊಡ್ಡ ಹಿನ್ನಡೆಯುಂಟು ಮಾಡಿದೆ.
ಸಾರ್ವಜನಿಕ ಸೇವೆಯಲ್ಲಿರುವವರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರಕಾರದ ಪೂರ್ವಭಾವಿ ಅನುಮತಿ ಅಗತ್ಯವಿದೆಯೆಂದು ಸುಪ್ರೀಂಕೋರ್ಟ್ ಕೂಡಾ ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ತಾಕೀತು ಮಾಡಿತ್ತು. ದಿಲ್ಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5ರಂದು ನಡೆಯಲಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೇಜ್ರಿವಾಲ್ ವಿರುದ್ಧ ಕಾನೂನುಕ್ರಮಕ್ಕೆ ಈಡಿಗೆ ಅನುಮತಿ ನೀಡಿದ ಕೇಂದ್ರ ಸರಕಾರದ ನಡೆಯನ್ನು ಆಪ್ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕ ಕಕ್ಕರ್ ಖಂಡಿಸಿದ್ದಾರೆ. ‘‘ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಬಿಡುಗಡೆ ನೀಡಿದೆ. ಪ್ರಕರಣ ದಾಖಲಾದ ಎರಡು ವರ್ಷಗಳ ಆನಂತರ, ಚುನಾವಣೆಗಳು ಸಮೀಪಿಸುತ್ತಿರುವಾಗ ಅವರ ವಿರುದ್ಧ ಕಾನೂನುಕ್ರಮಕ್ಕೆ ನೀವು ಅನುಮತಿ ನೀಡಿದ್ದೀರಿ. ಸುಳ್ಳು ಪ್ರಕರಣಗಳನ್ನು ದಾಖಲಿಸುವುದು, ಆಮ್ ಆದ್ಮಿ ಪಕ್ಷದ ನಾಯಕರ ಹೆಸರಿಗೆ ಮಸಿ ಬಳಿಯುವ ನಿಮ್ಮ ಹಳೆ ಚಾಳಿಯನ್ನು ಮುಂದುವರಿಸುತ್ತಾ ಬಂದಿರುವಿರಿ’’ ಎಂದು ಆಕೆ ಟೀಕಿಸಿದರು.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಅರವಿಂದ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ವಿರುದ್ಧ 2024ರ ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2024ರಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು.
ಕೇಜ್ರಿವಾಲ್ ಅವರು ದಿಲ್ಲಿ ಅಬಕಾರಿ ನೀತಿ ‘ಹಗರಣ’ದ ಸೂತ್ರಧಾರಿ ಮತ್ತು ಮುಖ್ಯಸಂಚುಕೋರನೆಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ. ಆಮ್ ಆದ್ಮಿ ಪಕ್ಷವು ಒಂದು ರಾಜಕೀಯ ಪಕ್ಷವಾಗಿರುವುದರಿಂದ, ಅದನ್ನು ಕಪ್ಪುಹಣಬಿಳುಪು ಕಾಯ್ದೆಯ ಸೆಕ್ಷನ್ 70ರ ಅಡಿ ಒಂದು ಕಂಪೆನಿಯ ಶ್ರೇಣಿಯಲ್ಲಿ ಪರಿಗಣಿಸಬಹುದೆಂದು ಅದು ವಾದಿಸಿತ್ತು.