ನನ್ನ ಕೊಲೆಗೆ ಯತ್ನ, ದಿಲ್ಲಿ ಜನತೆ ಇಂತಹ ಘಟನೆಯನ್ನು ಎಂದೂ ಕಂಡಿರಲಿಲ್ಲ: ಕೇಜ್ರಿವಾಲ್ ಆರೋಪ

ಅರವಿಂದ್ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ನನ್ನ ಜೀವವು ದೇಶಕ್ಕೆ ಮುಡಿಪಾಗಿದ್ದು, ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಹತ್ಯೆಗೈಯ್ಯಲು ಯತ್ನಿಸಿದ ಘಟನೆಯನ್ನು ದಿಲ್ಲಿ ಜನತೆ ಹಿಂದೆಂದೂ ಕಂಡಿರಲಿಲ್ಲ ಎಂದು ಆಪ್ ಮುಖ್ಯಸ್ಥ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಇದಕ್ಕೂ ಮುನ್ನ, ಪ್ರಚಾರದ ವೇಳೆ ತಮ್ಮ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ಆಪಾದಿಸಿದ್ದರು.
ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಮೇಲೆ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಕಡೆಯ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಶನಿವಾರ ಆಪ್ ನಾಯಕರು ದೂರಿದ್ದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಮುಖ್ಯಸ್ಥ ಕೇಜ್ರಿವಾಲ್, “ಮಾಜಿ ಮುಖ್ಯಮಂತ್ರಿಯೊಬ್ಬರ ಮೇಲೆ ದಾಳಿ ನಡೆಸಿದಂತಹ ಈ ರೀತಿಯ ಪ್ರಚಾರ ಸಮಾವೇಶ ಹಾಗೂ ಗಲಭೆಗೆ ದಿಲ್ಲಿಯ ಜನತೆ ಈ ಹಿಂದೆಂದೂ ಸಾಕ್ಷಿಯಾಗಿರಲಿಲ್ಲ. ಅವರು ಹೀನಾಯವಾಗಿ ಸೋಲುತ್ತಿರುವುದರಿಂದಲೇ, ಈ ರೀತಿ ಪ್ರಚಾರ ನಡೆಸುತ್ತಿದ್ದಾರೆ” ಎಂದು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ 20,000 ಮತಗಳ ಅಂತರದಿಂದ ಪರಾಭವಗೊಳ್ಳಲಿದ್ದಾರೆ ಎಂಬ ಪರ್ವೇಶ್ ವರ್ಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, “ಅವರು ಕೆಲವು ದಿನಗಳವರೆಗೆ ಕನಸು ಕಾಣುತ್ತಿರಲಿ ಬಿಡಿ” ಎಂದು ವ್ಯಂಗ್ಯವಾಡಿದ್ದಾರೆ.