ಕೇಜ್ರಿವಾಲ್, ಮಾನ್ ವಿರುದ್ಧ 100 ಕೋ. ರೂ. ಮಾನಹಾನಿ ಮೊಕದ್ದಮೆ ದಾಖಲಿಸಿದ ಬಿಜೆಪಿ ಸಂಸದ

ಪರ್ವೇಶ್ ವರ್ಮಾ | PTI
ಹೊಸದಿಲ್ಲಿ: ಬಿಜೆಪಿ ಸಂಸದ ಪರ್ವೇಶ್ ವರ್ಮಾ ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ 100 ಕೋ.ರೂ. ಮಾನ ಹಾನಿ ಮೊಕದ್ದಮೆ ದಾಖಲಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ ಮಾನ್ ತನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಆದುದರಿಂದ ಅವರ ವಿರುದ್ಧ ತಲಾ 50 ಕೋ.ರೂ. ಮಾನ ಹಾನಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಕಾನೂನು ಕ್ರಮದ ಘೋಷಣೆ ಮಾಡಿದ್ದು, ‘‘ನಾನು ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ ಮಾನ್ ವಿರುದ್ಧ ತಲಾ 50 ಕೋ.ರೂ.ನ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಅಲ್ಲದೆ, ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇನೆ’’ ಎಂದಿದ್ದಾರೆ.
ದೇಶದ ಭದ್ರತೆಗೆ ಪಂಜಾಬಿಗಳು ಬೆದರಿಕೆ ಎಂದು ವರ್ಮಾ ಅವರು ಉಲ್ಲೇಖಿಸಿದ್ದಾರೆ ಎಂಬ ಕೇಜ್ರಿವಾಲ್ ಅವರ ಹೇಳಿಕೆಗೆ ಸಂಬಂಧಿಸಿ ಈ ಮೊಕದ್ದಮೆ ದಾಖಲಾಗಿದೆ.
ಕೇಜ್ರಿವಾಲ್ ಅವರ ಆರೋಪವನ್ನು ವರ್ಮಾ ಅವರು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ, ಸಿಕ್ಖ್ ಸಮುದಾಯಕ್ಕೆ ತನ್ನ ಹಾಗೂ ತನ್ನ ಕುಟುಂಬದ ಕೊಡುಗೆಯನ್ನು ಒತ್ತಿ ಹೇಳಿದ್ದರು. ‘‘ಸಿಕ್ಖ್ ಸಮುದಾಯಕ್ಕೆ ತಾನು ಹಾಗೂ ತನ್ನ ಕುಟುಂಬ ಏನು ಮಾಡಿದೆ ಎಂದು ಉಲ್ಲೇಖಿಸುವ ಅಗತ್ಯ ಇಲ್ಲ’’ ಎಂದು ವರ್ಮಾ ಪ್ರತಿಪಾದಿಸಿದ್ದರು.