ಮಧ್ಯಮ ವರ್ಗದ ಹಿತರಕ್ಷಣೆಗಾಗಿ ಕೇಂದ್ರಕ್ಕೆ 7 ಬೇಡಿಕೆಯಿಟ್ಟ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್ | PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಬುಧವಾರ ತನ್ನ ಪಕ್ಷದ ಮಧ್ಯವರ್ಗಕ್ಕಾಗಿನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಶಿಕ್ಷಣ, ಆರೋಗ್ಯ, ತೆರಿಗೆ ರಿಯಾಯಿತಿ ಹಾಗೂ ಪಿಂಚಣಿ ಸೇರಿದಂತೆ ಕೇಂದ್ರ ಸರಕಾರದ ಮುಂದೆ ಏಳು ಬೇಡಿಕೆಗಳನ್ನು ಇರಿಸಿದ್ದಾರೆ. ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮಧ್ಯಮವರ್ಗದ ಜನತೆಗೆ ಸಮರ್ಪಿತವಾಗಿರಬೇಕೆಂದು ಅವರು ಮೋದಿ ಸರಕಾರವನ್ನು ಆಗ್ರಹಿಸಿದರು.
ಕೇಂದ್ರ ಸರಕಾರವು ದೇಶದ ಮಧ್ಯಮವರ್ಗದ ನೈಜಶಕ್ತಿಯನ್ನು ಮಾನ್ಯ ಮಾಡಬೇಕೆಂದು ಕೇಜ್ರಿವಾಲ್ ಕರೆ ನೀಡಿದರು. ಮಧ್ಯಮವರ್ಗದವರ ಹಿತರಕ್ಷಣೆಗಾಗಿ ಕೇಂದ್ರ ಸರಕಾರದ ಮುಂದೆ ಏಳು ಬೇಡಿಕೆಗಳನ್ನಿರಿಸಿದ್ದಾರೆ.
ಶಿಕ್ಷಣದ ಬಜೆಟನ್ನು ಶೇ.2ರಿಂದ ಶೇ.10ಕ್ಕೆ ಏರಿಕೆ ಮಾಡಬೇಕು, ಖಾಸಗಿ ಶಾಲಾ ಶುಲ್ಕಗಳಿಗೆ ಮಿತಿ ವಿಧಿಸಬೇಕು, ಉನ್ನತ ಶಿಕ್ಷಣಕ್ಕೆ ಸಬ್ಸಿಡಿ ಹಾಗೂ ಸ್ಕಾಲರ್ಶಿಪ್ ನೀಡಬೇಕು, ಆರೋಗ್ಯ ಕ್ಷೇತ್ರದ ಬಜೆಟ್ ಅನುದಾನವನ್ನು ಶೇ.10ಕ್ಕೆ ಹೆಚ್ಚಿಸಬೇಕು ಹಾಗೂ ಆರೋಗ್ಯ ವಿಮೆಯ ಮೇಲಿನ ತೆರಿಗೆಯನ್ನು ಕೈಬಿಡಬೇಕು ಎಂದು ಅರವಿಂದ ಕೇಜ್ರಿವಾಲ್ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.