ಆಪ್ ಆಡಳಿತದಲ್ಲಿ ಬಿಜೆಪಿ ಬೆಂಬಲಿಗರೂ ಪ್ರತಿ ತಿಂಗಳು 25,000 ರೂ. ಉಳಿತಾಯ ಮಾಡುತ್ತಿದ್ದಾರೆ: ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ | PTI
ಹೊಸದಿಲ್ಲಿ: ದಿಲ್ಲಿಯಲ್ಲಿ ಆಪ್ ಸರಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಬಿಜೆಪಿ ಬೆಂಬಲಿಗರೂ ಪ್ರತಿ ತಿಂಗಳು 25,000 ರೂ. ಉಳಿತಾಯ ಮಾಡುತ್ತಿದ್ದು, ಫೆಬ್ರವರಿ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಮತ ನೀಡುವಂತೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಕೇಜ್ರಿವಾಲ್, “ನಾನು ಬಿಜೆಪಿ ಬೆಂಬಲಿಗನೊಂದಿಗೆ ಮಾತನಾಡಿದೆ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಒದಗಿಸಲಾಗಿರುವ ಅನುಕೂಲಗಳ ಕುರಿತು ಅವರನ್ನು ಪ್ರಶ್ನಿಸಿದೆ” ಎಂದು ಹೇಳಿದ್ದಾರೆ.
“ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ನೀವೆಲ್ಲಿ ಹೋಗುತ್ತೀರಿ? ಎಷ್ಟು ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಉತ್ತಮ ಸರಕಾರಿ ಶಾಲೆಗಳಿವೆ? ಎಷ್ಟು ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ವಿದ್ಯುತ್ ಉಚಿತವಾಗಿದೆ ಹಾಗೂ ದಿನದ 24 ಗಂಟೆಯೂ ದೊರೆಯುತ್ತಿದೆ? ಎಂದು ನಾನು ಆತನನ್ನು ಪ್ರಶ್ನಿಸಿದೆ. ನಿನಗಾಗಿ ಮತ ಚಲಾಯಿಸು ಹಾಗೂ ಪೊರಕೆಯ ಚಿಹ್ನೆಯ ಗುಂಡಿಯನ್ನು ಒತ್ತು ಎಂದು ಆತನಿಗೆ ಮನವಿ ಮಾಡಿದೆ” ಎಂದು ತಮ್ಮ ಪಕ್ಷದ ಚಿಹ್ನೆಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಆಪ್ ಸರಕಾರದ ಅಡಳಿತದಲ್ಲಿ ದಿಲ್ಲಿಯ ಜನತೆ ಉಚಿತ ವಿದ್ಯುತ್, ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಂದ ತಿಂಗಳಿಗೆ ಸರಾಸರಿ 25,000 ರೂ. ಉಳಿತಾಯ ಮಾಡುತ್ತಿದ್ದಾರೆ. ಒಂದು ವೇಳೆ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಈ ಉಳಿತಾಯಕ್ಕೆ ಸಂಚಕಾರ ಬರಲಿದೆ ಎಂದು ಕೇಜ್ರಿವಾಲ್ ಎಚ್ಚರಿಸಿದ್ದಾರೆ.