ಆಪ್ ಕಾರ್ಯಕರ್ತರ ಮೇಲೆ ದಾಳಿ | ಚುನಾವಣಾ ಆಯೋಗಕ್ಕೆ ಕೇಜ್ರಿವಾಲ್ ಪತ್ರ

ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ಆಪ್ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ ಎಂದು ದಿಲ್ಲಿ ವಿಧಾನ ಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ರವಿವಾರ ಆರೋಪಿಸಿದ್ದಾರೆ.
ಅಲ್ಲದೆ, ತನ್ನ ಹೊಸದಿಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗಳ ಮೇಲ್ವಿಚಾರಣೆಗೆ ಸ್ವತಂತ್ರ ವೀಕ್ಷಕರನ್ನು ನೇಮಕ ಮಾಡುವಂತೆ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ನಗರದ ರೋಹಿಣಿ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭ ಆಮ್ ಆದ್ಮಿ ಪಕ್ಷದ ಶಾಸಕ ಮೊಹಿಂದರ್ ಗೋಯಲ್ ಅವರಿಗೆ ಹಲ್ಲೆ ನಡೆದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಗೋಯಲ್ ಅವರು ವಾಯುವ್ಯ ದಿಲ್ಲಿಯ ರಿತಾಲಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಕೇಜ್ರಿವಾಲ್, ಬಿಜೆಪಿ ಕಾರ್ಯಕರ್ತರು ಗೋಯಲ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ದಾಳಿಯನ್ನು ತಡೆಯಲು ವಿಫಲರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕೇಜ್ರಿವಾಲ್ ಅವರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಇತ್ತೀಚೆಗೆ ನಡೆದ ಇತರ ದಾಳಿಯ ಬಗ್ಗೆ ಕೂಡ ಹೇಳಿದ್ದಾರೆ. ಅಲ್ಲದೆ ಚುನಾವಣೆಗೆ ಮುನ್ನ ಆಪ್ ಕಾರ್ಯಕರ್ತರನ್ನು ನಿರಂಕುಶವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಚುನಾವಣಾ ಪ್ರಚಾರಕ್ಕೆ ಅಡ್ಡಿ ಉಂಟು ಮಾಡಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕೇಜ್ರಿವಾಲ್ ಅವರು ಬಿಜೆಪಿಯ ಪ್ರವೇಶ ವರ್ಮಾ ಹಾಗೂ ಕಾಂಗ್ರೆಸ್ನ ಸಂದೀಪ್ ದೀಕ್ಷಿತ್ ವಿರುದ್ಧ ಹೊಸದಿಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
ದಿಲ್ಲಿಯಲ್ಲಿ ಬುಧವಾರ ಚುನಾವಣೆ ನಡೆಯಲಿದೆ. ಶನಿವಾರ ಮತ ಎಣಿಕೆ ನಡೆಯಲಿದೆ.