ಕೇಜ್ರಿವಾಲ್ ಸರಕಾರದ ಅಬಕಾರಿ ನೀತಿಯಿಂದ ದಿಲ್ಲಿ ಸರಕಾರಕ್ಕೆ 2,000 ಕೋಟಿ ರೂ. ನಷ್ಟ: ಸಿಎಜಿ ವರದಿ

CAG | PC ; cag.gov.in
ಹೊಸದಿಲ್ಲಿ: ಈ ಹಿಂದಿನ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರಕಾರದ 2021-2022ರ ಅಬಕಾರಿ ನೀತಿಯಿಂದಾಗಿ ದಿಲ್ಲಿ ಸರಕಾರದ ಬೊಕ್ಕಸಕ್ಕೆ 2,000 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದಿಲ್ಲಿ ವಿಧಾನ ಸಭೆಯಲ್ಲಿ ಮಂಗಳವಾರ ಈ ವರದಿಯನ್ನು ಮಂಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ನೇತೃತ್ವದ ಹಿಂದಿನ ಸರಕಾರದ ಕಾರ್ಯಕ್ಷಮತೆಯ ಕುರಿತಾದ 14 ವರದಿಗಳ ಪೈಕಿ ಇದು ಒಂದಾಗಿದ್ದು, ದುರ್ಬಲ ನೀತಿ ಚೌಕಟ್ಟಿನಿಂದ ಹಿಡಿದು ಕೊರತೆಯ ಅನುಷ್ಠಾನದವರೆಗಿನ ವಿವಿಧ ಕಾರಣಗಳಿಂದಾಗಿ ದಿಲ್ಲಿ ಸರಕಾರ ಈ ನಷ್ಟ ಅನುಭವಿಸಿದೆ ಎಂದು ಹೇಳಿದೆ.
ಪರವಾನಿಗೆ ನೀಡುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವ ಮನೀಷ್ ಸಿಸೋಡಿಯಾ ಅವರು ತಜ್ಞರ ಸಮಿತಿಯ ಶಿಫಾರಸನ್ನು ನಿರ್ಲಕ್ಷಿಸಿದ್ದಾರೆ ಎಂದು ವರದಿ ಹೇಳಿದೆ.
ಈ ಕಾಯ್ದೆಯ ವ್ಯಾಪ್ತಿಗೆ ಒಳಪಡದ ಪುರಸಭೆ ವಾರ್ಡ್ಗಳಲ್ಲಿ ಸೂಕ್ತ ಪರವಾನಿಗೆ ಪಡೆಯದೇ ಮದ್ಯದಂಗಡಿಗಳನ್ನು ತೆರೆದಿರುವುದರಿಂದ ದಿಲ್ಲಿ ಸರಕಾರದ ಬೊಕ್ಕಸಕ್ಕೆ 941.53 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿ ಪ್ರತಿಪಾದಿಸಿದೆ. ಈ ಪ್ರದೇಶಗಳಲ್ಲಿ ಭೂ ಬಳಕೆಯ ನಿಯಮಗಳ ಆಧಾರದಲ್ಲಿ ಮದ್ಯದಂಗಡಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ.
ಈ ವಲಯಗಳ ಪರವಾನಿಗೆಯನ್ನು ಶರಣಾಗತಿ ಮಾಡಿರುವುದರಿಂದ ಹಾಗೂ ಅವುಗಳಿಗೆ ಮರು ಟೆಂಡರ್ ಕರೆಯಲು ಇಲಾಖೆ ವಿಫಲವಾಗಿರುವುದರಿಂದ ಅಬಕಾರಿ ಇಲಾಖೆಗೆ 890.15 ಕೋಟಿ ರೂ. ಪರವಾನಿಗೆ ಶುಲ್ಕ ನಷ್ಟವಾಗಿದೆ ಎಂದು ವರದಿ ಹೇಳಿದೆ. ಸಾಂಕ್ರಾಮಿಕ ರೋಗ ಕೋವಿಡ್ ಸಂದರ್ಭ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಪರವಾನಿಗೆದಾರರಿಗೆ ಶುಲ್ಕದಿಂದ ಮನ್ನಾ ಮಾಡಲಾಗಿದೆ. ಇದರಿಂದ 144 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ.
ನಿಯಮಕ್ಕೆ ಅನುಗುಣವಾಗಿ ಇಲ್ಲದ ಪ್ರದೇಶಗಳಲ್ಲಿ ಮಧ್ಯದಂಗಡಿಗಳನ್ನು ತೆರೆಯುವುದಕ್ಕೆ ಮಾಸ್ಟರ್ ಪ್ಲ್ಯಾನ್ ದಿಲ್ಲಿ-2021 ನಿಷೇಧ ವಿಧಿಸಿತ್ತು. ಆದರೆ, ಅಬಕಾರಿ ನೀತಿ 2021-22 ಪ್ರತಿ ವಾರ್ಡ್ಗಳಲ್ಲಿ ಕನಿಷ್ಠ ಎರಡು ಚಿಲ್ಲರೆ ಮಧ್ಯದ ಅಂಗಡಿಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿತ್ತು ಎಂದು ವರದಿ ಹೇಳಿದೆ. ಸರಕಾರದ ಅನುಮತಿ ಇಲ್ಲದೆ, ನಿಯಮಕ್ಕೆ ಅನುಗುಣವಾಗಿ ಇಲ್ಲದ ಪ್ರದೇಶಗಳಲ್ಲಿ ಮದ್ಯದಂಗಡಿಗಳು ಇರುವಂತಿಲ್ಲ ಎಂದು ಟೆಂಡರ್ ದಾಖಲೆ ಹೇಳಿದ್ದವು.
ಆದರೆ, 2021 ಜೂನ್ 28ರಂದು ಟೆಂಡರ್ ಜಾರಿಗೊಳಿಸುವ ಮುನ್ನ ಅಬಕಾರಿ ಇಲಾಖೆ ಅಗತ್ಯವಿರುವ ಅನುಮತಿಯನ್ನು ಕೋರಿರಲಿಲ್ಲ. 2021 ಆಗಸ್ಟ್ನಲ್ಲಿ ಪರವಾನಿಗೆ ಮಂಜೂರು ಮಾಡಲಾಗಿತ್ತು. 2021 ನವೆಂಬರ್ 17ರಿಂದ ಮದ್ಯದಂಗಡಿಗಳು ಕಾರ್ಯಾಚರಿಸಲು ಆರಂಭವಾಗಿದ್ದವು. ಆದರೆ, ಈ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) 2021 ನವೆಂಬರ್ 16ರಂದು ಆದೇಶ ಜಾರಿ ಮಾಡಿತ್ತು. ಪರವಾನಿಗೆದಾರರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ 67 ಸಂತ್ರಸ್ತ ವಾರ್ಡ್ಗಳಲ್ಲಿ ಪರವಾನಿ ಶುಲ್ಕ ಪಾವತಿಸುವುದರಿಂದ ಅವರಿಗೆ ವಿನಾಯತಿ ನೀಡಿತ್ತು. ಇದು ದಿಲ್ಲಿ ಸರಕಾರದ ಬೊಕ್ಕಸಕ್ಕೆ 941.53 ಕೋಟಿ ರೂ. ನಷ್ಟವಾಗಲು ಕಾರಣವಾಯಿತು ಎಂದು ವರದಿ ಹೇಳಿದೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 2022 ಜುಲೈಯಲ್ಲಿ ದಿಲ್ಲಿ ಅಬಕಾರಿ ನೀತಿ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಬಳಿಕ ಈ ಭ್ರಷ್ಟಾಚಾರದ ಆರೋಪ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಸೇರಿದಂತೆ ಹಲವು ಆಪ್ ನಾಯಕರು ಕಾರಾಗೃಹದಲ್ಲಿದ್ದರು.