ಮಹಿಳೆಯರು, ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳಿಗೆ ನೋಂದಣಿ ಸೋಮವಾರದಿಂದ ಪ್ರಾರಂಭ: ಕೇಜ್ರಿವಾಲ್
PC : PTI
ಹೊಸದಿಲ್ಲಿ: ದಿಲ್ಲಿಯ ಮಹಿಳೆಯರಿಗೆ ಮಾಸಿಕ 1,000 ರೂ.ಗಳ ಆರ್ಥಿಕ ನೆರವನ್ನು ಒದಗಿಸುವ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ ನೋಂದಣಿ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಳ್ಳಲಿದೆ ಎಂದು ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ರವಿವಾರ ಇಲ್ಲಿ ಪ್ರಕಟಿಸಿದರು. ಇದಕ್ಕಾಗಿ ಮಹಿಳೆಯರು ಎಲ್ಲಿಗೂ ಹೋಗಬೇಕಿಲ್ಲ,ಪಕ್ಷದ ಕಾರ್ಯಕರ್ತರೇ ಮನೆ ಬಾಗಿಲಿಗೆ ಬಂದು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ ಎಂದರು.
ದಿಲ್ಲಿ ಸರಕಾರವು ತನ್ನ 2024-25ನೇ ಸಾಲಿನ ಮುಂಗಡಪತ್ರದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗಾಗಿ ಈ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಕೇಜ್ರಿವಾಲ್ ಅವರು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಆರ್ಥಿಕ ನೆರವನ್ನು ಮಾಸಿಕ 2,100 ರೂ.ಗೆ ಹೆಚ್ಚಿಸುವುದಾಗಿ ಇತ್ತೀಚಿಗೆ ಪ್ರಕಟಿಸಿದ್ದರು.
ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಸಂಜೀವನಿ ಯೋಜನೆಗೂ ನೋಂದಣಿ ಸೋಮವಾರದಿಂದ ಆರಂಭಗೊಳ್ಳಲಿದ್ದು,ಆಪ್ ಕಾರ್ಯಕರ್ತರು ಅವರ ಮನೆಗಳಲ್ಲಿಯೇ ನೋಂದಣಿಯನ್ನು ಮಾಡಲಿದ್ದಾರೆ ಎಂದೂ ಕೇಜ್ರಿವಾಲ್ ತಿಳಿಸಿದರು.